ಕೇರಳದ ಮಾಜಿ ಸಚಿವೆ ಶೈಲಜಾಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಅವಾರ್ಡ್​ ಪಡೆಯಲು ಬಿಡದ ಸರ್ಕಾರ- ಕಾರಣ ಇದಂತೆ!

shailaja
Published on

ತಿರುವನಂತಪುರ (ಕೇರಳ): ಕೇರಳದಲ್ಲಿ ಮಾರಕವಾಗಿ ಕಾಡಿದ್ದ ನಿಫಾ ಮತ್ತು ಕೋವಿಡ್​ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದ ಕೇರಳ ಆರೋಗ್ಯ ಇಲಾಖೆ ಮಾಜಿ ಸಚಿವೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್​ವಾದಿ (ಸಿಪಿಎಂ) ನಾಯಕಿ ಕೆ.ಕೆ. ಶೈಲಜಾ ಅವರು ಪ್ರತಿಷ್ಠಿತ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಸಿಪಿಎಂನ ಕೇರಳ ಘಟಕವು ಅವರಿಗೆ ಪ್ರಶಸ್ತಿ ಸ್ವೀಕರಿಸಲು ಅವಕಾಶ ನಿರಾಕರಿಸಿರುವ ಕಾರಣ, ಒಲಿದುಬಂದಿರುವ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ಇವರಿಗಿಲ್ಲ!

ರಾಮನ್ ಮ್ಯಾಗ್ಸೆಸೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ಶೈಲಜಾ ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಸಲ್ಲಿಸಿದ ಸೇವೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಬದ್ಧತೆ ಮತ್ತು ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಮೊದಲಿಗೆ ಪ್ರಶಸ್ತಿ ಸ್ವೀಕರಿಸಲು ಶೈಲಜಾ ಅವರಲ್ಲಿ ಪ್ರತಿಷ್ಠಾನವು ಒಪ್ಪಿಗೆ ಕೇಳಿತ್ತು.

ಈ ಹಿನ್ನೆಲೆಯಲ್ಲಿ ಶೈಲಜಾ ಅವರು ಪಕ್ಷದ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸಮಾಲೋಚನೆ ನಡೆದಿದ್ದು, ಅಂತಿಮವಾಗಿ ಪ್ರಶಸ್ತಿ ಪಡೆಯದಿರಲು ಹೈಕಮಾಂಡ್​ ಸೂಚಿಸಿದೆ. ಇದರ ಬೆನ್ನಲ್ಲೇ ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸದಿರುವ ಬಗ್ಗೆ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದಾರೆ.

ಒಂದು ವೇಳೆ ಶೈಲಜಾ ಪ್ರಶಸ್ತಿ ಸ್ವೀಕರಿಸಿದ್ದೇ ಆಗಿದ್ದರೆ, ಈ ಪ್ರಶಸ್ತಿ ಪಡೆದ ಕೇರಳದ ಮೊದಲ ಮಹಿಳೆ ಮತ್ತು ಐದನೇ ಮಲಯಾಳಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಿದ್ದರು. ಈ ಮೊದಲು ಈ ಪ್ರಶಸ್ತಿಯನ್ನು ವರ್ಗೀಸ್ ಕುರಿಯನ್, ಎಂಎಸ್ ಸ್ವಾಮಿನಾಥನ್, ಬಿಜಿ ವರ್ಗೀಸ್ ಮತ್ತು ಟಿಎನ್ ಶೇಷನ್ ಅವರಿಗೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವೆ ಕೆ.ಕೆ.ಶೈಲಜಾ, ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸುವುದು ಸಿಪಿಎಂನ ನಿರ್ಧಾರವಾಗಿದೆ. ಕೇಂದ್ರ ಹಾಗೂ ರಾಜ್ಯ ನಾಯಕರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಷ್ಠಾನವು ನನ್ನನ್ನು ಪ್ರಶಸ್ತಿಗೆ ಪರಿಗಣಿಸಿದ್ದಕ್ಕೆ ಸಮಿತಿಗೆ ಧನ್ಯವಾದಗಳು ಎಂದು ಹೇಳಿದರು.

ಅಷ್ಟಕ್ಕೂ ಪ್ರಶಸ್ತಿ ಬೇಡ ಎನ್ನಲು ಕಾರಣ, ಶೈಲಜಾ ಅವರು ಪಕ್ಷದಿಂದ ನಿಯೋಜಿಸಲಾದ ಕರ್ತವ್ಯವನ್ನು ಮಾತ್ರ ನಿರ್ವಹಿಸಿದ್ದಾರೆ. ಇದು ವಿಶೇಷವೇನೂ ಎನ್ನುವುದಂತೆ! ಈ ಬಗ್ಗೆ ಮಾತನಾಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕೋವಿಡ್​ ಸಮಯದಲ್ಲಿ ಮಾಡಿರುವ ಕೆಲಸ ವೈಯಕ್ತಿಕ ಅಲ್ಲ, ಬದಲಿಗೆ ಇದು ಕೇರಳ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಜಂಟಿ ಕೆಲಸವಾಗಿದೆ ಎಂದಿದ್ದಾರೆ. ಜತೆಗೆ, ರಾಮನ್ ಮ್ಯಾಗ್ಸೆಸೆ ಅವರು ಕಮ್ಯುನಿಸ್ಟ್ ವಿರೋಧಿಯಾಗಿದ್ದಾರೆ, ಅದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಚಿವೆಯಾಗಿ ಮಾಡಿರುವ ಕೆಲಸಕ್ಕೆ ಹೀಗೆ ಪ್ರಶಸ್ತಿ ಪಡೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net