

ಭೋಪಾಲ್: ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಲೆಕ್ಕವಿಲ್ಲ, ಕುಟುಂಬದ ಆಸರೆಯಾದವರನ್ನು ಕಳೆದುಕೊಂಡು ಅಲ್ಲೋಲ ಕಲ್ಲೋಲವಾಗಿರುವ ಕುಟುಂಬಗಳ ಗೋಳೂ ಹೇಳತೀರದು. ಇಂಥ ಸಮಯದಲ್ಲಿ ತಕ್ಕಷ್ಟು ಮಟ್ಟಿಗೆ ನೆರವಾಗಲು ಸನ್ನದ್ಧವಾಗಿರುವ ಮಧ್ಯಪ್ರದೇಶ ಸರ್ಕಾರ, ಕೋವಿಡ್‌ನಿಂದ ಬಾಧಿತವಾಗಿರುವ ಕುಟುಂಬಗಳಿಗೆ ಮಾಸಿಕ 5 ಸಾವಿರ ರೂಪಾಯಿ ಹಾಗೂ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದಾಗಿ ಹೇಳೆದೆ.
ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಕಟಿಸಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದವರು ಸೋಂಕಿನಿಂದ ಮೃತಪಟ್ಟಿದ್ದರೆ ಅಂಥವರ ಕುಟುಂಬಗಳಿಗೆ ಸ್ವಉದ್ಯೋಗ ಕೈಗೊಳ್ಳಲು ಬಡ್ಡಿರಹಿತವಾಗಿ ಸರ್ಕಾರ ಸಾಲ ಒದಗಿಸಲಾಗುವುದು ಎಂದೂ ಅವರು ಘೋಷಣೆ ಮಾಡಿದ್ದಾರೆ. ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ಆ ಕುಟುಂಬಗಳು ಅರ್ಹರಲ್ಲದಿದ್ದರೂ ಉಚಿತವಾಗಿ ಪಡಿತರ ನೀಡಲಾಗುತ್ತದೆ' ಎಂದೂ ತಿಳಿಸಿದರು.
ಕೋವಿಡ್‌ನಿಂದಾಗಿ ಹಲವಾರು ಕುಟುಂಬಗಳು ಬಾಧಿತವಾಗಿದ್ದು, ಮಕ್ಕಳ ಕಾಳಜಿಯನ್ನು ಸರ್ಕಾರವೇ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ನಡುವೆ ಮೇ 12 (ಬುಧವಾರ) 8,970 ಹೊಸ ಪ್ರಕರಣ ದಾಖಲಾಗಿದ್ದು, 84 ಮಂದಿ ಮೃತಪಟ್ಟಿದ್ದಾರೆ. ಕರೊನಾ ಸೋಂಕಿತರ ಸಂಖ್ಯೆ 7,00,202ಕ್ಕೆ ಏರಿದ್ದರೆ ಮೃತರ ಸಂಖ್ಯೆ 6,679ಕ್ಕೆ ಏರಿದೆ.