ಅಯ್ಯೋ... ನನ್ನ ಹೊಟ್ಟೆಯಲ್ಲೇ ಹುಟ್ಟಿದ್ರೂ ಈ ಮಗು ನನ್ನದಲ್ಲ.... ಕೋರ್ಟ್‌ಗೆ ಧಾವಿಸಿದ ಮಹಿಳೆ: ಮುಂದಾದದ್ದೇ ರೋಚಕ

baby
Published on

ಲಾಸ್​ ಏಂಜಲೀಸ್​​: ಈ ಪಾಪು ನನ್ನ ಹೊಟ್ಟೆಯಲ್ಲಿಯೇ ಹುಟ್ಟಿದ್ದು ನಿಜ, ಆದರೆ ಈ ಮಗು ನನ್ನದಲ್ಲ ಎಂದು ಗೋಳೋ ಎಂದ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಕೋರ್ಟ್‌ಗೆ ಧಾವಿಸಿರುವ ಅಚ್ಚರಿ ಘಟನೆ ಲಾಸ್​ ಏಂಜಲೀಸ್​​ ನಡೆದಿದೆ.

ಆಗಿದ್ದೇನೆಂದರೆ, ದಫನಾ ಹಾಗೂ ಅಲೆಕ್ಸಾಂಡರ್​​ ದಂಪತಿಗೆ ಇದಾಗಲೇ ಒಂದು ಮಗುವಿದೆ. ಇನ್ನೊಂದು ಮಗುವನ್ನು ಅವರು ಪಡೆಯಬಯಸಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು. ಪತಿಯ ವೀರ್ಯವನ್ನು ಪತ್ನಿಯ ಗರ್ಭದಲ್ಲಿ ಇರಿಸಿ ನಂತರ ಮಗುವನ್ನು ಪಡೆಯುವ ತಂತ್ರಜ್ಞಾನ ಇದಾಗಿದೆ. ಅದೇ ರೀತಿ ಮಾಡಲಾಗಿತ್ತು. ಇದು ಯಶಸ್ವಿಯೂ ಆಗಿ ಮುದ್ದಾದ ಮಗು ಹುಟ್ಟಿತು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮಗು ಸ್ವಲ್ಪ ದೊಡ್ಡದಾಗುತ್ತಿದ್ದಂತೆಯೇ ಈ ಅಮ್ಮನಿಗೆ ಮಗುವೇಕೋ ತನ್ನದಲ್ಲ ಎನ್ನಿಸಲು ಶುರುವಾಗಿದೆ. ಮಗುವಿನ ಮುಖ ಚೆಹರೆ ಕೂಡ ತನ್ನಂತೆ ಅಥವಾ ‍ಪತಿಯಂತೆ ಇಲ್ಲ ಎನ್ನಲು ಶುರುವಾಗಿದೆ. ಮಾತ್ರವಲ್ಲದೇ ಆಕೆಯ ಇಡೀ ಕುಟುಂಬದವರ ಮುಖ ಚಹರೆಗಿಂತ ಮಗು ಭಿನ್ನವಾದಂತೆ ಅನ್ನಿಸಲು ಆಕೆಗೆ ಅನುಮಾನ ಶುರುವಾಗಿದೆ.

ಈ ಕಾರಣದಿಂದ ದಂಪತಿ ಮಗುವಿನ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲಿ ಅವರು ಅಂದುಕೊಂಡಂತೆ ಮಗು ಅವರದ್ದಲ್ಲ ಎಂದು ಸಾಬೀತಾಗಿದೆ! ನಂತರ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ. ಆಸ್ಪತ್ರೆ ವಿರುದ್ಧ ಕೇಸ್‌ ಹಾಕಿದ್ದಾರೆ.

ಕೊನೆಗೆ ತನಿಖೆಯಿಂದ ತಿಳಿದುಬಂದದ್ದು ಏನೆಂದರೆ ಒಂದೇ ಆಸ್ಪತ್ರೆಯಲ್ಲಿ ಒಟ್ಟಿಗೇ ಇಬ್ಬರು ಮಹಿಳೆಯರು ಐವಿಎಫ್‌ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು. ವೈದ್ಯರ ಎಡವಟ್ಟಿನಿಂದಾಗಿ ಇನ್ನೊಂದು ಮಹಿಳೆಯ ಪತಿಯ ವೀರ್ಯವನ್ನು ದಫನಾ ಅವರ ಗರ್ಭದಲ್ಲಿಯೂ ದಫನಾ ಅವರ ಪತಿಯ ವೀರ್ಯವನ್ನು ಆ ಮಹಿಳೆಯ ಗರ್ಭದಲ್ಲಿಯೂ ಇಡಲಾಗಿದೆ. ಆದ್ದರಿಂದ ಆ ದಂಪತಿ ಮಗುವನ್ನು ಈಕೆ ಹೆತ್ತಿದ್ದರೆ, ಈ ದಂಪತಿ ಮಗುವನ್ನು ಆಕೆ ಹೆತ್ತಿದ್ದಾರೆ!

ನಂತರ ಆಸ್ಪತ್ರೆ ತಪ್ಪನ್ನು ಒಪ್ಪಿಕೊಂಡಿದೆ. ಐವಿಎಫ್​ ತಂತ್ರಜ್ಞಾನ ಅದಲು ಬದಲಾಗಿರುವ ಕಾರಣ, ಈ ಪ್ರಮಾದ ನಡೆದಿರುವುದಾಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಕೊನೆಗೂ ಪ್ರಕರಣ ಸುಖಾಂತ್ಯಗೊಂಡಿದ್ದು, ಈಕೆ ಹೆತ್ತ ಮಗುವನ್ನು ಆಕೆಗೂ, ಆಕೆ ಹೆತ್ತ ಮಗುವನ್ನು ಈಕೆಗೂ ಕೊಡಲಾಯಿತು. ಕೊನೆಗೆ ಮಕ್ಕಳು ತಮ್ಮ ಸ್ವಂತ ಅಪ್ಪ-ಅಮ್ಮನನ್ನು ಸೇರಿದ್ದಾರೆ. ಇಷ್ಟು ತಿಂಗಳು ತಮ್ಮ ಜತೆ, ತಮ್ಮ ಜತೆಯಿದ್ದ ಕಂದಮ್ಮಗಳನ್ನು ಬೇರೆಯವರಿಗೆ (ನಿಜವಾದ ಅಮ್ಮನಿಗೆ) ಒಪ್ಪಿಸಲು ಇಬ್ಬರೂ ಅಮ್ಮಂದಿರಿಗೆ ತುಂಬಾ ಕಷ್ಟವಾಯಿತು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net