

ಜೈಪುರ: ಬಹುತೇಕ ಇಲಾಖೆಗಳಲ್ಲಿ ಲಂಚ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲು ಭಾರಿ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಎಲ್ಲೆಡೆ ಆರೋಪ ಕೇಳಿಬರುತ್ತಿದೆ. ಈ ನಡುವೆಯೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶಿಕ್ಷಕರಿಗೆ ಲಂಚದ ಬಗ್ಗೆ ಪ್ರಶ್ನೆ ಕೇಳಿ ವೇದಿಕೆ ಮೇಲಿದ್ದ ಶಿಕ್ಷಣ ಸಚಿವರು ತಲೆ ತಗ್ಗಿಸುವ ಹಾಗೆ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು, ನೀವು ವರ್ಗಾವಣೆಗೆ ಲಂಚ ಕೊಡಬೇಕಾದ ಸ್ಥಿತಿ ಇದೆಯೇ ಎಂದುಪ್ರಶ್ನಿಸಿದರು. ಆಗ ಶಿಕ್ಷಕರು ಒಕ್ಕೋರಲಿನಿಂದ ಹೌದು ಹೌದು ಎಂದು ಕೂಗಿದರು. ಶಾಸಕರಿಂದ ಶಿಫಾರಸನ್ನೂ ಮಾಡಿಸಬೇಕಿದೆ ಎಂದೂ ಕೆಲವರು ಹೇಳಿದರು. ಇಷ್ಟು ಹೇಳುತ್ತಿದ್ದಂತೆಯೇ ವೇದಿಕೆ ಮೇಲೆ ಕುಳಿತಿದ್ದ ಶಿಕ್ಷಣ ಸಚಿವ ಗೋವಿಂದ್ ದೋತಾಸ್ರ ಮುಖ ಕಪ್ಪಿಟ್ಟಿತು. ಮುಖ್ಯಮಂತ್ರಿಗಳು ಅವರನ್ನು ನೋಡಿದಾಗ ತಲೆ ತಗ್ಗಿಸಿದ ಸಚಿವರಿಗೆ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅರ್ಥವಾಗಲಿಲ್ಲ.
ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪ್ರಶ್ನೆಯನ್ನು ಇದೇ ರೀತಿಯ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಕೇಳಬೇಕಿದೆ ಎಂದು ಕಮೆಂಟ್ ಮಾಡಲಾಗುತ್ತಿದೆ.
ಶಿಕ್ಷಕರು ಈ ರೀತಿ ಉತ್ತರಿಸುತ್ತಿದ್ದಂತೆಯೇ ಮುಖ್ಯಮಂತ್ರಿಗಳು ವರ್ಗಾವಣೆಗೆ ಹಣ ನೀಡಬೇಕಾಗಿರುವುದು ದುರಾದೃಷ್ಟಕರ. ಈ ಕುರಿತು ಸಮರ್ಪಕ ನೀತಿ ರೂಪಿಸಬೇಕಿದೆ ಎಂದು ಹೇಳಿದರು.
‘ವರ್ಗಾವಣೆಗಾಗಿ ಪರಿಣಾಮಕಾರಿ ನೀತಿ ರೂಪಿಸುತ್ತೇವೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಲಂಚ ಅಥವಾ ಶಿಫಾರಸಿನ ತೊಂದರೆ ಅನುಭವಿಸಬೇಕಿಲ್ಲ’ ಎಂದು ತಮ್ಮ ಭಾಷಣದಲ್ಲಿ ಶಿಕ್ಷಣ ಸಚಿವ ದೊತಾಸ್ರ ಹೇಳುವ ಮೂಲಕ ಅಲ್ಲಿಗೆ ಪರಿಸ್ಥಿತಿಯನ್ನು ನಿಭಾಯಿಸಿದರು.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿನ ಈ ಲಂಚಾವತಾರದ ವಿಡಿಯೋ ಬಿಜೆಪಿಗೆ ಅಸ್ತ್ರವಾಗಿದೆ. 2023ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಇದ್ದು, ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಕೂಡ ರಾಜಸ್ಥಾನ ಶಿಕ್ಷಕರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿತ್ತು. ಇದೀಗ ಅದಕ್ಕೆ ಇಂಬುಸಿಕ್ಕಂತಾಗಿದೆ.