ಕರೊನಾ ಲಸಿಕೆ 2024ಕ್ಕಿಂತ ಮುಂಚೆ ಸಂಪೂರ್ಣ ಲಭ್ಯವಾಗುವುದು ಅಸಾಧ್ಯ!

adar poonawalla
Published on

ನವದೆಹಲಿ: ಕರೊನಾ ಆರಂಭವಾದಾಗಿನಿಂದಲೂ ಅದಕ್ಕಾಗಿ ಇಡೀ ವಿಶ್ವವೇ ಲಸಿಕೆ ತಯಾರಿಸಲು ಮುಂದಾಗಿದೆ. ಕರೊನಾ ಸೋಂಕಿನಿಂದ ಮುಕ್ತಿ ಪಡೆಯುವ ಸಂಬಂಧ ವಿವಿಧ ದೇಶಗಳ ಘಟಾನುಘಟಿ ವೈದ್ಯರು ಲಸಿಕೆ ತಯಾರಿಕೆಯ ಹಿಂದೆ ಬಿದ್ದಿದ್ದಾರೆ.

ಆದರೆ ಇದರ ಬೆನ್ನಲ್ಲೇ ಕರೊನಾ ಸೋಂಕು ಮಾತ್ರ ದಿನೇ ದಿನೇ ಉಗ್ರ ಸ್ವರೂಪ ತಾಳುತ್ತಲೇ ಇದ್ದು, ಲಸಿಕೆ ಯಾವಾಗ ಬರುವುದೋ ಎಂದು ಜನ ಕಾತರರಾಗಿದ್ದಾರೆ.

ಆದರೆ ಈ ನಡುವೆಯೇ ಪುಣೆಯ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಆತಂಕಕಾರಿ ಮಾಹಿತಿ ನೀಡಿದ್ದು, ಕರೊನಾ ನಿಯಂತ್ರಣ ಲಸಿಕೆಯು ಎಲ್ಲರಿಗೂ ಲಭ್ಯವಾಗುವಂತೆ ಆಗಲು ಇನ್ನೂ ನಾಲ್ಕು ವರ್ಷ ಬೇಕು. 20204ರ ಕಮ್ಮಿ ಇದು ಲಭ್ಯವಾಗುವುದು ಅಸಾಧ್ಯ ಎಂದಿದ್ದಾರೆ. ಎಸ್‌ಐಐ ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪೆನಿ ಎನಿಸಿದೆ.

ಇದಕ್ಕೆ ಪೂರಕ ಎಂಬಂತೆ ಇದಾಗಲೇ ತಯಾರಾಗಿರುವ ಲಸಿಕೆಗಳು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗದೇ ಇರುವುದು ಹಾಗೂ ಯಶಸ್ವಿಯಾಯಿತು ಎಂದುಕೊಳ್ಳುವಷ್ಟರಲ್ಲಿಯೇ ಸೈಡ್​ ಎಫೆಕ್ಟ್​ನಿಂದ ಲಸಿಕೆ ಸ್ಟಾಪ್​ ಆಗಿರುವುದು ಎಲ್ಲವೂ ಪೂನಾವಾಲಾ ಅವರ ಹೇಳಿಕೆಗೆ ಆಧಾರವಾಗಿವೆ. ಕಳೆದ ವಾರ, ಇಂಗ್ಲೆಂಡ್​ನಲ್ಲಿ ಸ್ವಯಂಸೇವಕರು ಅನಾರೋಗ್ಯಕ್ಕೆ ಒಳಗಾದ ನಂತರ ಅಸ್ಟ್ರಾಜೆನೆಕಾ ಅವರ ಆಕ್ಸ್‌ಫರ್ಡ್ ಲಸಿಕೆ ಅಭ್ಯರ್ಥಿಯ ಮಾನವ ಪ್ರಯೋಗಗಳನ್ನು ನಿಲ್ಲಿಸಲಾಯಿತು, ಅದರ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹ ಪ್ರಯೋಗಗಳನ್ನೂ ಬಂದ್​ ಮಾಡಿದೆ.

ಕಂಪೆನಿಗಳಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಲಸಿಕೆ ಸದ್ಯದಲ್ಲೇ ಲಭ್ಯವಿಲ್ಲ ಎಂದು ಅದಾರ್​ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಸೇರಂ ಇನ್ಸ್‌ ಟಿಟ್ಯೂಟ್‌ ಆಫ್ ಇಂಡಿಯಾ ಆಸ್ಟ್ರಾಜೆನೆಕಾ, ನಾವೋವ್ಯಾಕ್ಸ್‌ ಸೇರಿದಂತೆ ಜಗತ್ತಿನ ಐದು ಅಂತಾರಾಷ್ಟ್ರೀಯ ಔಷಧೋದ್ಯಮಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು ಲಸಿಕೆ ಅಭಿವೃದ್ಧಿಯಾದರೆ, 100 ಕೋಟಿ ಡೋಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ 50 ಶೇಕಡಾ ಲಸಿಕೆಯನ್ನು ಭಾರತೀಯರಿಗೆ ನೀಡುವುದಾಗಿ ಭರವಸೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net