

ನವದೆಹಲಿ: ಕರೊನಾ ಪಾಸಿಟಿವ್ ಬಂದವರು ಹಾಗೂ ಲಕ್ಷಣಗಳು ಇದ್ದ ಸಂದರ್ಭಗಳಲ್ಲಿ ಕೆಲವೊಮ್ಮೆ ವೈದ್ಯರು ಮನೆಯಲ್ಲಿಯೇ ಉಳಿದುಕೊಳ್ಳುವಂತೆ (ಹೋಂ ಐಸೊಲೇಷನ್ಗೆ) ಶಿಫಾರಸು ಮಾಡುತ್ತಾರೆ. ಸೌಮ್ಯ ಹಾಗೂ ಯಾವುದೇ ಲಕ್ಷಣಗಳಲ್ಲಿ ಇಲ್ಲದಿದ್ದರೂ ಪಾಸಿಟಿವ್ ಹೊಂದಿರುವವರಿಗೆ ಹೆಚ್ಚಾಗಿ ಈ ಸೂಚನೆ ನೀಡಲಾಗುತ್ತಿದೆ.
ಅಂಥ ಸಂದರ್ಭಗಳಲ್ಲಿ ಮನೆಯಲ್ಲಿ ಇರುವವರು ಏನೆಲ್ಲಾ ಮುನ್ನೆಚ್ಚರಿಕಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅದರಲ್ಲಿ ಇರುವ ಅಂಶಗಳು ಹೀಗಿವೆ:
* ಸೌಮ್ಯ ಲಕ್ಷಣ ಇಲ್ಲವೇ ಯಾವುದೇ ಲಕ್ಷಣ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆಯಬೇಕು.
* ಮನೆಯಲ್ಲಿ ಬೇರೆಯವರಿಗೆ ಸೋಂಕು ಹರಡದಂತೆ ಪ್ರತ್ಯೇಕ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯ ಏರ್ಪಾಡು ಮಾಡಿಕೊಳ್ಳಬೇಕು.
*60 ವರ್ಷ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಲಿವರ್, ಕಿಡ್ನಿ ಸಮಸ್ಯೆ ಹೊಂದಿರುವವರು ಸರಿಯಾಗಿ ವೈದ್ಯಾಧಿಕಾರಿಯ ನಿಗಾದಲ್ಲಿರಬೇಕು.
* 24 ಗಂಟೆಯೂ ಸೋಂಕಿತನ ಕಾಳಜಿ ಮಾಡಲು ಯಾರಾದರೂ ಇರಬೇಕು. ಆ ವೇಳೆ ಎಲ್ಲಾ ನಿಮಗಳ ಪಾಲನೆ ಮಾಡಬೇಕು.
*ಎಚ್ಐವಿ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಿಗೆ ಹೋಮ್ ಐಸೋಲೇಷನ್ನಲ್ಲಿ ಇರಲು ಅವಕಾಶವಿಲ್ಲ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದು ದೃಢವಿದ್ದರೆ ಮಾತ್ರ ಐಸೋಲೇಷನ್ ಆಯ್ಕೆ ನೀಡಬಹುದು.
* ವೈದ್ಯರ ಸೂಚನೆಯಂತೆ ಸೋಂಕಿತರ ಕಾಳಜಿ ವಹಿಸುವವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಹೈಡ್ರೋಕ್ಸಿಕ್ಲೋರೋಕ್ವಿನ್ ಪ್ರೊಪೈಲ್ಯಾಕ್ಸಿಸ್ ಸೇವಿಸಬೇಕು.
* ಸೋಂಕಿತ ವ್ಯಕ್ತಿ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕು. ಮನೆಯಲ್ಲಿ ವಯಸ್ಸಾದವರು ಅಥವಾ ರಕ್ತದೊತ್ತಡ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಮೀಪ ಹೋಗಬಾರದು.
* ಗಾಳಿಯಾಡುವಂತಹ ಕೋಣೆಯಲ್ಲಿಯೇ ಸೋಂಕಿತರನ್ನು ಇಡಬೇಕು.
*ಸೋಂಕಿತರು ತಮ್ಮ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವಂತಿಲ್ಲ.
* ಸೋಂಕಿತರು ಮೂರು ಲೇಯರ್ ಮೆಡಿಕಲ್ ಮಾಸ್ಕ್ಗಳನ್ನೇ ಧರಿಸಬೇಕು. ಎಂಟು ಗಂಟೆಗಳಿಗೊಮ್ಮೆ ಮಾಸ್ಕ್ ಬದಲಾಯಿಸಬೇಕು. ಸೋಂಕಿತರ ಕಾಳಜಿ ತೆಗೆದುಕೊಳ್ಳುವವರು ಕೋಣೆಗೆ ಬರುವ ಮುನ್ನ ಎನ್ 95 ಮಾಸ್ಕ್ ಧರಿಸಬೇಕು.
* 1 ಪರ್ಸೆಂಟ್ ಸೋಡಿಯಂ ಹೈಪೋಕ್ಲೋರೈಟ್ನಿಂದ ಮಾಸ್ಕ್ಗಳನ್ನ ಸೋಂಕು ರಹಿತ ಮಾಡಿ ಬಳಿಕ ಅದನ್ನು ನಾಶ ಮಾಡಬೇಕು.
*ಸೋಂಕಿತರ ದ್ರವಾಹಾರಗಳಣ್ನು ಹೆಚ್ಚಾಗಿ ಸೇವಿಸಬೇಕು.
* ಸೋಂಕಿತ ವ್ಯಕ್ತಿ ಪ್ರತಿ ದಿನ ದೇಹದ ತಾಪಮಾನವನ್ನ ಪರೀಕ್ಷೆ ಮಾಡಿಕೊಳ್ಳಬೇಕು.
* ಎಲ್ಲಾ ಸಮಯದಲ್ಲೂ ಉಸಿರಾಟದ ಶಿಷ್ಟಾಚಾರಗಳನ್ನ ಪಾಲಿಸಬೇಕು.
* ಆಕ್ಸಿಮೀಟರ್ನ ಸಹಾಯದಿಂದ ಆಗಾಗ ಆಮ್ಲಜನಕ ಮಟ್ಟವನ್ನು ಪರೀಕ್ಷೆ ಮಾಡುತ್ತಿರಬೇಕು.
* 40 ಸೆಕೆಂಡ್ಗಳ ಕಾಲ ಸೋಪು ಇಲ್ಲವೇ ಆಲ್ಕೋಹಾಲ್ ಇರುವ ಸ್ಯಾನಿಟೈಸರ್ಗಳಿಂದ ಕೈ ತೊಳೆದುಕೊಳ್ಳಬೇಕು.
* 1 ಪರ್ಸೆಂಟ್ ಹೈಪೋಕ್ಲೋರೈಟ್ ಸೊಲ್ಯೂಷನ್ನಿಂದ ಕೋಣೆಯ ಪ್ರತಿಯೊಂದು ಮೂಲೆಯನ್ನ ಸ್ವಚ್ಛ ಮಾಡಬೇಕು.
ಹೀಗಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ:
1. ಉಸಿರಾಟದ ತೊಂದರೆ.
2. ಆಮ್ಲಜನಕ ಮಟ್ಟ ಇಳಿಕೆಯಾಗುವುದು.
3. ಎದೆಯಲ್ಲಿ ನೋವು ಕಾಣಿಸಿಕೊಂಡಾಗ.
4. ಮಾನಸಿಕವಾಗಿ ಆರೋಗ್ಯ ಹದಗೆಡುತ್ತಿದೆ ಎನಿಸಿದಾಗ.