

ಮುಂಬೈ: ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿದ್ದ ಪ್ರಕಾಶ್ ಷಾ ಅವರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ವರ್ಷಕ್ಕೆ 75 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದ ಷಾ ಅವರು ಈ ಸಿರಿವಂತಿಕೆಯಿಂದ ಹೊರಕ್ಕೆ ಬಂದು, ಸನ್ಯಾಸತ್ವದ ಹಾದಿ ತುಳಿದಿದ್ದಾರೆ.
ಮುಖೇಶ್ ಅಂಬಾನಿಯ ಬಲಗೈನಂತಿದ್ದ ಇವರು ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಜತೆ ಇವರ ಪತ್ನಿ ನೈನಾ ಷಾ ಕೂಡ ದೀಕ್ಷೆ ಸ್ವೀರಕಸಿದ್ದಾರೆ. ಕಳೆದ ಭಾನುವಾರ ಮಹಾವೀರ ಜಯಂತಿಯಂದು ದೀಕ್ಷಾ ಕಾರ್ಯದ ಪ್ರಕ್ರಿಯೆ ನಡೆದಿದೆ. ಇದೀಗ ಇವರು ಬಿಳಿಯ ವಸ್ತ್ರ ಧರಿಸಿ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆಯೇ ಅವರು ಇಂಥದ್ದೊಂದು ನಿರ್ಧಾರ ಮಾಡಿದ್ದರು. ಆದರೆ ಕರೊನಾದ ಹಿನ್ನೆಲೆಯಲ್ಲಿ ದೀಕ್ಷಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಕಾಶ್ ಅವರು ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ಇವರಿಗೆ ವಾರ್ಷಿಕ 75 ಕೋಟಿ ರೂಪಾಯಿ ಸಂಬಳ ಬರುತ್ತಿತ್ತು ಎನ್ನಲಾಗಿದೆ.
ರಿಲಯನ್ಸ್ ಕಂಪೆನಿಯ ಜಾಮ್ ನಗರದ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜೆಕ್ಟ್ ಆರಂಭಿಸುವಲ್ಲಿ ಶಾ ಮಹತ್ವದ ಪಾತ್ರವಿತ್ತು. ಪ್ರಕಾಶ್ ಅವರು 40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು.
ಇವರ ಒಬ್ಬ ಪುತ್ರ ಐಐಟಿ ಮುಂಬೈನಿಂದ ಇಂಜನಿಯರಿಂಗ್ ಪದವಿ ಪಡೆದಿದ್ದು, ಅವರು ಕೂಡ ಏಳು ವರ್ಷಗಳ ಹಿಂದೆಯೇ ದೀಕ್ಷೆ ಸ್ವೀಕರಿಸಿದ್ದಾರೆ. ಇನ್ನೋರ್ವ ಪುತ್ರನಿಗೆ ಮದುವೆಯಾಗಿದ್ದು ಒಂದು ಮಗುವಿದೆ.