

ಬೆಂಗಳೂರು: ಕರೊನಾ ವೈರಸ್ ಸಂಕಷ್ಟದ ನಡುವೆಯೇ ಇದೀಗ ಬ್ರಿಟನ್ ವೈರಸ್ ತನಿಖಾಧಿಕಾರಿಗಳ ನಿದ್ದೆಗೆಡಿಸಿದೆ. ಬ್ರಿಟನ್‌ನಲ್ಲಿ ಹೊಸ ಕೋವಿಡ್ ಸೋಂಕು ಪತ್ತೆಯಾದ ದಿನದಿಂದ 1582 ಮಂದಿ ಬೆಂಗಳೂರು ವಿಮಾನನಿಲ್ದಾಣದಲ್ಲಿ ಬಂದು ಇಳಿದಿದ್ದಾರೆ. ಆದರೆ ಅವರ ಪೈಕಿ 151 ಪತ್ತೆಯಿಲ್ಲದೇ ಇದೀಗ ಭಾರಿ ಆತಂಕ ಸೃಷ್ಟಿಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಬಂದಿಳಿದಿದ್ದ 1585 ಮಂದಿಯಲ್ಲಿ 11 ಪ್ರಯಾಣಿಕರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇವರ ಜತೆ 29 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿರುವುದು ಪತ್ತೆಯಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಈ ಕರೊನಾ ಸೋಂಕು ಬ್ರಿಟನ್‌ನಲ್ಲಿ ಕಂಡುಬಂದಿರುವ ಹೊಸ ರೂಪಾಂತರವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಈ ಎಲ್ಲಾ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ. ಈ 151 ಮಂದಿ ಪೈಕಿ ಎಲ್ಲರೂ ಬೆಂಗಳೂರು ವಾಸಿಗಳೇ ಅಥವಾ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೋದವರೇ ಎಂಬ ಬಗ್ಗೆಯೂ ಇನ್ನೂ ಪತ್ತೆಯಾಗುತ್ತಿಲ್ಲ. ಇವರ ಪೈಕಿ ಯಾರೊಬ್ಬರಿಗೂ ಕರೊನಾದ ಹೊಸ ರೂಪಾಂತರ ವೈರಸ್ ಇದ್ದರೆ ಅದು ಇಡೀ ರಾಜ್ಯಕ್ಕೇ ಮಾರಕ ಆಗುವ ಸಾಧ್ಯತೆ ಇದೆ.
ಈ ಎಲ್ಲರ ಕಾಲ್ ಡೀಟೈಲ್ಸ್ ಆಧಾರದ ಮೇಲೆ ನಾಪತ್ತೆಯಾಗಿರುವವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದರ ಜತೆಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ಪಾಸಿಟಿವ್ ಪ್ರಕರಣಗಳಲ್ಲಿ ರೂಪಾಂತರ ಕರೊನಾ ವೈರಸ್ ಇರುವ ಬಗ್ಗೆ ಪತ್ತೆಹಚ್ಚಲು ಸೋಂಕಿತರ ಸ್ವಾಬ್‍ಅನ್ನು ಮೈಕ್ರೋ ಲ್ಯಾಬ್‍ಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ರೂಪಾಂತರ ವೈರಸ್ ಹೌದೋ, ಅಲ್ಲವೋ ಎಂಬುದು ತಿಳಿದುಬರಲಿದೆ ಎಂದರು.