ಕರೊನಾಕ್ಕೆ ಬಲಿಯಾದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಸೌಮಿತ್ರ ಚಟರ್ಜಿ

soumitra1
Published on

ಕೋಲ್ಕತಾ: ಬಂಗಾಳಿಯ ಖ್ಯಾತ ನಟ ಸೌಮಿತ್ರ ಚಟರ್ಜಿ ನಿಧನರಾಗಿದ್ದಾರೆ. ಇವರಿಗೆ 85 ವರ್ಷ ವಯಸ್ಸಾಗಿತ್ತು. ಕರೊನಾ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಇವರು ಬಳಲುತ್ತಿದ್ದರು.

ಅಕ್ಟೋಬರ್ 6ರಂದು ಕರೊನಾ ಸೋಂಕು ದೃಢವಾಗಿತ್ತು. ಅಂದಿನಿಂದ ಅವರು ಕೋಲ್ಕತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದರೆಡು ದಿನದಿಂದ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಇದೀಗ ಅವರು ಮೃತಪಟ್ಟಿರುವ ಸುದ್ದಿ ಬಂದಿದೆ.

ನರ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಯಿಂದ ಬಳಲುತ್ತಿದ್ದ ಚಟರ್ಜಿ ಅವರು ಚಿಕಿತ್ಸೆ ನಂತರವೂ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಚಟರ್ಜಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಒಂದಕ್ಕಿಂತ ಹೆಚ್ಚು ಲೈಫ್ ಸಪೋರ್ಟ್ ಯಂತ್ರಗಳನ್ನು ಅಳವಡಿಸಲಾಗಿದೆ.

ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಪವಾಡ ನಡೆಯದ ಹೊರತು ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ನಿನ್ನೆಯೇ ಹೇಳಿದ್ದರು. ಚಟರ್ಜಿ ಅವರ ಮೂತ್ರಪಿಂಡಗಳ ಕಾರ್ಯ ಸಂಪೂರ್ಣ ಹದಗೆಟ್ಟಿತ್ತು. ಗುರುವಾರ ಅವರಿಗೆ ಮೊದಲ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಬುಧವಾರ ಟ್ರಾಕಿಯೊಸ್ಟೊಮಿ ನಡೆಸಲಾಗಿತ್ತು. ಆದರೆ ಅದು ಯಾವುದೂ ಪ್ರಯೋಜನವಾಗಿಲ್ಲ ಎಂದಿದ್ದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಚಟರ್ಜಿಯವರು ಭಾಜನರಾಗಿದ್ದಾರೆ. 2018ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಆಫ್ ಆನರ್ ಕೂಡ ಲಭಿಸಿತ್ತು.

ಸೌಮಿತ್ರ ಅವರು ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net