

ನವದೆಹಲಿ: ಕರೊನಾ ಸೋಂಕಿನ ಲಸಿಕೆ ಕಂಡುಹಿಡಿಯಲು ಅನೇಕ ದೇಶಗಳು ಪ್ರಯತ್ನಿಸುತ್ತಲೇ ಇವೆ. ಭಾರತದಲ್ಲಿಯೂ ಲಸಿಕೆ ಸಂಶೋಧನೆ ಶುರುವಾಗಿದೆ. ಇದಕ್ಕಾಗಿ 900 ಕೋಟಿ ರೂಪಾಯಿಗಳನ್ನು ಮೀಸಲು ಇಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ವಿವಿಧ ಯೋಜನೆಗಳ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್-19 ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗೆ 900 ಕೋಟಿ ರೂಪಾಯಿ ನೀಡುವುದಾಗಿ ಹೇಳಿದರು. ಜೀವಶಾಸ್ತ್ರ ಇಲಾಖೆ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಸಂಶೋಧನೆ ಕೈಗೊಂಡಿದ್ದು, ಈ ಆರ್ಥಿಕ ನೆರವು ನೀಡುವುದಾಗಿ ನಿರ್ಮಲಾ ತಿಳಿಸಿದರು.
ಈ ಅನುದಾನವು ಕೇವಲ ಲಸಿಕೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಲಸಿಕೆ ಲಭ್ಯವಾದ ನಂತರದಲ್ಲಿ ಪ್ರತ್ಯೇಕ ಅನುದಾನವನ್ನು ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಲಸಿಕೆಯ ಮೂಲವೆಚ್ಚ ಮತ್ತು ವಿತರಣೆ ವೆಚ್ಚವೂ ಪ್ರತ್ಯೇಕವಾಗಿರಲಿದೆ ಎಂದು ಹೇಳಿದರು.
ಕೊವಿಡ್-19 ಸೋಂಕಿನ ಲಸಿಕೆಯು ಮಾರುಕಟ್ಟೆಗೆ ಬರುವುದನ್ನೇ ಜನರು ನಿರೀಕ್ಷಿಸುತ್ತಿದ್ದಾರೆ. ಅದೇ ಇನ್ನೊಂದೆಡೆ ಕರೊನಾ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿದರೆ ವ್ಯಾಪಾರ ವಹಿವಾಟು ಸೇರಿದಂತೆ ಆರ್ಥಿಕ ಚಟುವಟಿಕೆಗಳ ಮೇಲೆ ಮತ್ತೆ ನಿರ್ಬಂಧ ವಿಧಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.