

ಅಹಮದಾಬಾದ್ (ಗುಜರಾತ್): ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ನಿಯಮಾನುಸಾರ ಬೋರ್ಡಿಂಗ್ ಪಾಸ್ ನಿರಾಕರಿಸಿದ್ದಕ್ಕೆ ಅಲ್ಲಿಯ ಸಿಬ್ಬಂದಿಯ ಕೆನ್ನೆಗೆ ಹೊಡೆದಿರುವ ಘಟನೆ ನಡೆದಿದೆ.
ಸ್ಪೈಸ್‌ಜೆಟ್ ವಿಮಾನಯಾನ ಸಿಬ್ಬಂದಿಗೆ ಸಬ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯೊಬ್ಬರು ಇಂಥ ಕೃತ್ಯ ಎಸಗಿದ್ದು, ಈ ಘಟನೆ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಎಡೆಮಾಡಿತ್ತು.
ಅಷ್ಟಕ್ಕೂ ಆಗಿದ್ದೇನೆಂದರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರು ದೆಹಲಿಗೆ ಪ್ರಯಾಣಿಸುವ ಸಲುವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಸ್ಪೈಸ್ ಜೆಟ್ ಎಸ್‌ಜಿ-8194ರಲ್ಲಿ ಅವರು ನಿನ್ನೆ ಮಂಗಳವಾರ ಪ್ರಯಾಣಿಸಬೇಕಿತ್ತು.
ಆದರೆ ಅವರು ತಡವಾಗಿ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದ ನಿಯಮದ ಪ್ರಕಾರ, ನಿಗದಿತ ಸಮಯದೊಳಗೆ ಬೋರ್ಡಿಂಗ್ ಪಾಸ್ ಕೌಂಟರ್ ಬಳಿ ಬಾರದೇ ಹೋದರೆ ಅವರಿಗೆ ಬೋರ್ಡಿಂಗ್ ಪಾಸ್ ನೀಡಲಾಗುವುದಿಲ್ಲ. ಆದ್ದರಿಂದ ಅಲ್ಲಿಯ ಸಿಬ್ಬಂದಿ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸಬ್ ಇನ್ಸ್‌ಪೆಕ್ಟರ್, ವಿಮಾನಯಾನ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದಾರೆ. ವಿಷಯ ದೊಡ್ಡದಾಡುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಮಾನಯಾನ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರನ್ನು ಹಿಂದಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಆದರೂ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರಿಗೆ ವಿಮಾನ ಹತ್ತಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.