ಮಗಳಿಗೆ ಆಸೆ ತೋರಿಸಿ ಮತಾಂತರಕ್ಕೆ ಯತ್ನ- ದಾಖಲಾಯ್ತು ಮೊದಲ ಕೇಸ್​

love jihad
Published on

ಲಖನೌ: ಹಿಂದೂ ಯುವತಿಯರಿಗೆ ಆಮಿಷ ಒಡ್ಡಿ ಅಥವಾ ಬೇರೆ ರೀತಿಯಲ್ಲಿ ಮೋಸ ಮಾಡುವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿರುವುದನ್ನು ಮನಗಂಡು ಮತಾಂತರ ನಿಷೇಧ ಕಾಯ್ದೆಯನ್ನು ಈಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಇದೀಗ ಮೊದಲ ಕೇಸ್​ ಒಂದು ದಾಖಲಾಗಿದೆ.

ಬಲವಂತದ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್‌ ಅವರು ಶನಿವಾರವಷ್ಟೇ ಅಂಕಿತ ಹಾಕಿದ್ದರು.

ಇದೀಗ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ತಂದೆಯೊಬ್ಬರು ಉವೇಶ್​ ಅಹ್ಮದ್​ ಎಂಬಾತನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ದೇವರ್ನಿಯಾ ಠಾಣೆ ವ್ಯಾಪ್ತಿಯ ಶರೀಫ್‌ನಗರ ಗ್ರಾಮದ ಟೀಕಾರಾಮ್‌ ಎನ್ನುವವರು ಈ ದೂರನ್ನು ದಾಖಲಿಸಿದ್ದಾರೆ.

ತಮ್ಮ ಮಗಳಿಗೆ ಆಮಿಷ ಒಡ್ಡಿ ಉವೇಶ್​ ಅಹ್ಮದ್​ ಎಂಬಾತ ಮತಾಂತರಕ್ಕೆ ಪ್ರಯತ್ನ ಮಾಡುತ್ತಿರುವುದಾಗಿ ಟೀಕಾರಾಮ್​ ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೃಹ ಇಲಾಖೆಯ ಹೆಚ್ಚುವರಿ ಕಾರ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಕೂಡ ಮಾಹಿತಿ ನೀಡಿದ್ದು, ಹೊಸ ಕಾನೂನಿನ್ವಯ ಮೊದಲ ಕೇಸ್​ ದಾಖಲಾಗಿದೆ ಎಂದಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಯುವಕ ಯುವತಿಗೆ ಮದುವೆಗೆ ಒತ್ತಾಯ ಮಾಡಿದ್ದಾನೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಬ್ಬರು ಪರಿಚಿತರೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net