ರಾಜಸ್ಥಾನ ಬಿಕ್ಕಟ್ಟು ಅಂತ್ಯ: ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಗೆಹ್ಲೋಟ್​ ಬೈ ಬೈ- ಶಶಿ, ಸಿಂಗ್​ ನಡುವೆ ಫೈಟ್

rajasthan
Published on

ಜೈಪುರ (ರಾಜಸ್ಥಾನ): ರಾಜಸ್ಥಾನದ ರಾಜಕೀಯದಲ್ಲಿ ಕೆಲ ದಿನಗಳಿಂದ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಕೊನೆಗೂ ಅಂತ್ಯಕಂಡಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ ದಿನದಿಂದ ಆರಂಭಗೊಂಡಿದ್ದ ಗೊಂದಲ ವಾತಾವರಣ ಕೊನೆಗೂ ತಿಳಿಗೊಂಡಿದೆ. ಕಾಂಗ್ರೆಸ್​ ಇಬ್ಭಾಗವಾಗುವ ತನಕ ಹೋಗಿದ್ದ ಗಲಾಟೆ ಸುಖಾಂತ್ಯಗೊಂಡಿದೆ. ಭಾರತ್​ ಜೋಡೋ ಬದಲು ಕಾಂಗ್ರೆಸ್​ ಜೋಡೋ ಮಾಡಿ ಎಂದು ಗೋಳೋ ಎನ್ನುತ್ತಿದ್ದ ಕಾಂಗ್ರೆಸ್​ ಕಾರ್ಯಕರ್ತರೀಗ ಸಮಾಧಾನ ಪಟ್ಟುಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಸಿಎಂ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಒಬ್ಬರು ಒಂದೇ ಹುದ್ದೆ ಅಲಂಕರಿಸಬೇಕು ಎಂದು ಕಾಂಗ್ರೆಸ್​ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷರಾದರೆ ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಅವರ ಉತ್ತರಾಧಿಕಾರಿಯಾಗಿ ಸಚಿನ್​ ಪೈಲಟ್​ ಸಿಎಂ ಖುರ್ಚಿ ಏರಲು ತಯಾರಿ ನಡೆಸಿದ್ದರು. ಆದರೆ ಅವರನ್ನು ಸುತರಾಂ ಸಿಎಂ ಆಗಲು ಬಿಡುವುದಿಲ್ಲ ಎಂದು ಇದಾಗಲೇ ಗೆಹ್ಲೋಟ್​ ಬೆಂಬಲಿಗರಾಗಿರುವ 90 ಮಂದಿ ರಾಜೀನಾಮೆಯನ್ನೂ ನೀಡಿಬಿಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​ ಎದುರಾಗಿತ್ತು.

ಇದರ ನಡುವೆಯೇ ಇದೀಗ ಗೆಹ್ಲೋಟ್​ ಭಾರಿ ತ್ಯಾಗ ಮಾಡಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಅವರು ಹೊರಕ್ಕೆ ಉಳಿದಿದ್ದಾರೆ. ಇವರ ವಿರುದ್ಧ ಹೈಕಮಾಂಡ್​ ಕೂಡ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದು ಅವರಿಗೆ ಅನಿವಾರ್ಯ ಕೂಡ ಆಗಿತ್ತು. ಕಾಂಗ್ರೆಸ್​ ಇಬ್ಭಾಗವಾಗುವುದನ್ನು ತಪ್ಪಿಸಲು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೇ ಇರುವುದು ಒಂದೇ ದಾರಿಯಾಗಿತ್ತು. ಆದ್ದರಿಂದ ಅವರೀಗ ತ್ಯಾಗ ಮಾಡಿದ್ದಾರೆ.

ಈಗೇನಿದ್ದರೂ ಸಂಸದರಾದ ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಮಧ್ಯೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಎರಡು ದಶಕಗಳ ಬಳಿಕ ಗಾಂಧಿಯೇತರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ತರೂರ್​ ಮತ್ತು ದಿಗ್ವಿಜಯ್​ ಸಿಂಗ್​ ಮಧ್ಯೆ ನಡೆಯಲಿದೆ.

'ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ರಾಜ್ಯದಲ್ಲಿ ನಡೆದ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಈ ನೋವನ್ನು ನನ್ನ ಜೀವನದ ಉದ್ದಕ್ಕೂ ನಾನು ಅನುಭವಿಸುತ್ತೇನೆ' ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಅಶೋಕ್​ ಗೆಹ್ಲೋಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಈ ನಡುವೆ ಶಶಿ ತರೂರ್​ ಟ್ವೀಟ್​ ಮಾಡಿದ್ದು, 'ನನ್ನದು ಮತ್ತು ದಿಗ್ವಿಜಯ ಸಿಂಗ್​ ಅವರ ನಡುವಿನದ್ದು ಪ್ರತಿಸ್ಪರ್ಧಿಗಳ ನಡುವೆ ನಡೆಯುವಂತಹ ಯುದ್ಧವಲ್ಲ. ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಅಷ್ಟೇ ಎಂಬುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಯಾರೇ ಗೆದ್ದರೂ ಅದು ಭಾರತ ಗೆಲುವಾಗಲಿದೆ' ಎಂದು ಹೇಳಿಕೊಂಡಿದ್ದು, ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಕೇರಳದಲ್ಲಿ ಶಶಿ ತರೂರ್​ ಅವರ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಸಿಡಿದೆದ್ದಿದ್ದು, ತಮಗೆ ರಾಹುಲ್​ ಗಾಂಧಿಯ ನಾಯಕತ್ವವೇ ಬೇಕು ಎಂದಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net