ಕಾಂಗ್ರೆಸ್​ನ ಹಿರಿಯ ಮುಖಂಡ, ಶಾಸಕ ಥಾಮಸ್​ ನಿಧನ

thomas
Published on

ತಿರುವನಂತಪುರ: ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಹಾಲಿ ಶಾಸಕರಾಗಿದ್ದ ಸಿ.ಎಫ್ ಥಾಮಸ್ ಇಂದು ನಿಧನರಾಗಿದ್ದಾರೆ.

ಚಂಗನಚ್ಚೇರಿ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಥಾಮಸ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಕೆಲ ಕಾಲದಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ತಿರುವಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತಕ್ಕೊಳಗಾಗಿ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲ್ಯದಿಂದಲೂ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಥಾಮಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿ ಚಂಗನಚ್ಚೆರಿ ಜಿಲ್ಲಾ ಉಪಾಧ್ಯಕ್ಷರಾದರು. ಕೆಲ ಕಾಲ ಚಂಗನಚ್ಚೇರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಕೇರಳ ಕಾಂಗ್ರೆಸ್ ಸ್ಥಾಪನೆಯಾದ ಬಳಿಕ ಆ ಪಕ್ಷ ಸೇರಿ ಉನ್ನತ ಸ್ಥಾನ ಪಡೆದಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರಾಗಿದ್ದರು.

1980ರಿಂದ ಕೊಟ್ಟಾಯಂ ಜಿಲ್ಲೆಯ ಚಂಗನಚ್ಚೇರಿ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದ್ದರು. 2001 ರಿಂದ 2006ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಖಾದಿ, ಗುಡಿ ಕೈಗಾರಿಕೆ ಖಾತೆ ಸಚಿವರಾಗಿದ್ದರು. ಕೇರಳ ಕಾಂಗ್ರೆಸ್(ಎಂ) ಕೆಎಂ ಮಣಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ.

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಣಿ ನಿಧನರಾದ ಬಳಿಕ ಕೇರಳ ಕಾಂಗ್ರೆಸ್​ನಲ್ಲಿ (ಎಂ) ಉಂಟಾಗಿದ್ದ ಬಂಡಾಯದಲ್ಲಿ ಪಿಜೆ ಜೋಸೆಫ್ ಬಣದಲ್ಲಿ ಥಾಮಸ್ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net