ಅಪ್ಪನ ಜೀವಕ್ಕೆ ಕುತ್ತು ತಂದ ನೌಕರಿ- ಮಗನಿಂದಲೇ ಭೀಕರ ಹತ್ಯೆ!

Murder
Published on

ಜಾರ್ಖಂಡ್: ಮನುಷ್ಯನ ವಿಕೃತಿ ಮನಸ್ಸನ್ನು ತೋರಿಸುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಅಂಥದ್ದೇ ಒಂದು ಭಯಾನಕ ಎನ್ನುವಂಥ ಕೃತ್ಯ ಎಸಗಿದ್ದಾನೆ ಇಲ್ಲೊಬ್ಬ ಮಗ. ಉದ್ಯೋಗಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ ಈತ!

ಈ ಭಯಾನಕ ಘಟನೆ ನಡೆದಿರುವುದು ಜಾರ್ಖಂಡ್​ನ ರಾಮಗಢ ಜಿಲ್ಲೆಯಲ್ಲಿ. ನಿರುದ್ಯೋಗಿ ಮಗನೊಬ್ಬ ಮಾಡಿರುವ ಕೃತ್ಯವಿದು.

ಅಷ್ಟಕ್ಕೂ ಆಗಿದ್ದೇನೆಂದರೆ ಕೃಷ್ಣ ರಾಮ್ ಅವರು ರಾಮಗಢ ಜಿಲ್ಲೆಯ ಬರ್ಕಾಕಾನದಲ್ಲಿರುವ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್​ನಲ್ಲಿ (ಸಿಸಿಎಲ್) ಹೆಡ್ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೊಬ್ಬ ನಿರುದ್ಯೋಗಿ ಮಗ.

ವರ್ಷ 35 ಆದರೂ ಮಗನಿಗೆ ಉದ್ಯೋಗ ಸಿಕ್ಕಿರಲಿಲ್ಲ. ಎಲ್ಲೆಡೆ ಕೆಲಸ ಹುಡುಕಿ ಹುಡುಕಿ ಸುಸ್ತಾದ ಆತ ಕೊನೆಗೊಂದು ಘನಘೋರ ಪ್ಲ್ಯಾನ್​ ಮಾಡಿಯೇ ಬಿಟ್ಟಿದ್ದಾನೆ. ಅದೇ ತಂದೆಯನ್ನು ಕೊಲೆ ಮಾಡುವ ಯೋಜನೆ. ಅಂತೂ ಯೋಜನೆ ರೂಪಿಸಿಕೊಂಡಂತೆ ಅದೊಂದು ದಿನ ತಂದೆ ಮಲಗಿದ್ದಾಗ ಚಾಕುವಿನಿಂದ ಕತ್ತುಸೀಳಿ ಕೊಲೆ ಮಾಡಿದ್ದಾನೆ!

ಅಷ್ಟಕ್ಕೂ ಕೊಲೆ ಮಾಡಿರುವ ಹಿಂದಿರುವ ಉದ್ದೇಶವೆಂದರೆ ತಾನು ಕೆಲಸ ಗಿಟ್ಟಿಸಿಕೊಳ್ಳಲು. ಅಪ್ಪನ ಕಂಪೆನಿಯ ನಿಯಮದ ಪ್ರಕಾರ, ಸೇವೆಯಲ್ಲಿರುವಾಗಲೇ ಉದ್ಯೋಗಿಗಳು ಮೃತಪಟ್ಟರೆ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿತ್ತು. ಅಪ್ಪನನ್ನು ಕೊಂದರೆ ತನಗೆ ಉದ್ಯೋಗ ಸಿಗುತ್ತದೆ ಎಂಬ ಕಾರಣದಿಂದ ಕೊಲೆ ಮಾಡಿದ್ದಾನೆ ಈ ಮಗ!

ಆದರೆ ಎಲ್ಲವೂ ಉಲ್ಟಾ ಆಯಿತು. ಯಾರೋ ಬಂದು ಅಪ್ಪನ ಕೊಲೆ ಮಾಡಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ. ಆದರೆ ತನಿಖೆಯ ವೇಳೆಗೆ ಈತನೇ ಕೊಲೆ ಮಾಡಿರುವುದು ತಿಳಿದಿದೆ. ನಂತರ ತನ್ನ ಕೃತ್ಯದ ಕುರಿತು ಈತ ಬಾಯಿ ಬಿಟ್ಟಿದ್ದಾನೆ.

ಇತ್ತ ಅಪ್ಪನನ್ನೂ ಕಳೆದುಕೊಂಡು, ಈಗ ಜೈಲುಪಾಲಾಗಿದ್ದಾನೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net