

ಲಖನೌ (ಉತ್ತರ ಪ್ರದೇಶ): ಇದೇ 26ರಂದು ಉತ್ತರ ಪ್ರದೇಶದ ವಾಜಪೇಯಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಮೂವರು ಮಕ್ಕಳು ಮೃತಪಟ್ಟಿದ್ದರು. ಘಟನೆಯಲ್ಲಿ ಓರ್ವ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಿಧ ಅಪಘಾತಗಳಲ್ಲಿ ಗಾಯಗೊಂಡವರ ಸ್ಥಿತಿಗತಿ ಗಮನಿಸಲು ಆಸ್ಪತ್ರೆಗೆ ಬಂದಿದ್ದ ಲಖನೌ ಕಮಿಷನರ್ ರೋಷನ್ ಜೇಕಬ್ ಮೋತಿಪುರ್ ಅವರ ಗಮನ ಈ ಬಾಲಕನ ಮೇಲೆ ಹೋಗಿದ್ದು, ಆತನನ್ನು ಕಂಡು ಬಿಕ್ಕಿಬಿಕ್ಕಿ ಅತ್ತ ಘಟನೆ ನಡೆದಿದೆ.
9 ವರ್ಷದ ಬಾಲಕನ ಬೆನ್ನಿಗೆ ಬಲವಾಗಿ ಪೆಟ್ಟಾಗಿದ್ದು, ಅವನು ತನ್ನ ಹೊಟ್ಟೆಯ ಮೇಲೆ ಮಲಗಿ ನರಳುತ್ತಿದ್ದ. ಅದನ್ನು ನೋಡಲಾಗದೇ ರೋಷನ್ ಅವರು ಕಣ್ಣೀರು ಸುರಿಸಿದ್ದಾರೆ. ಮಗನ ನರಳಾಟ ನೋಡಲಾಗದೇ ಪಕ್ಕದಲ್ಲಿ ಕುಳಿತ ತಾಯಿ ಕಣ್ಣೀರು ಹಾಕುವುದನ್ನು ಕಂಡ ಕಮಿಷನರ್ ರೋಷನ್ ಅವರಿಗೆ ದುಃಖ ತಡೆಯಲು ಆಗಲಿಲ್ಲ.
ಕೂಡಲೇ ಮಗುವನ್ನು ಲಖನೌದ ಕೆಜಿಎಂಯು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸುವಂತೆ ರೋಷನ್ ಅವರು ಎಡಿಎಂ ಸಂಜಯ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶಿಸಿದರು. ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಮಾತನಾಡಿ ಕೂಡಲೇ ಈ ಮಗುವಿಗೆ ಆರ್ಥಿಕ ನೆರವು ನೀಡಬೇಕು ಎಂದು ಅವರು ಸೂಚನೆಯನ್ನೂ ನೀಡಿದರು.
ಈ ಬಾಲಕನಿಗೆ ಚಿಕಿತ್ಸೆ ನೀಡಲು ಸರ್ಕಾರಿ ನೌಕರರು ಕೂಡ ಜತೆಗಿದ್ದು, ಚಿಕಿತ್ಸೆ ಕೊಡಿಸುವುದಾಗಿ ರೋಷನ್ ಜೇಕಬ್ ಅಭಯ ನೀಡಿದ್ದಾರೆ. ಅಳುತ್ತಿದ್ದ ತಾಯಿ ಮತ್ತು ಮಗುವಿಗೆ ಆಯುಕ್ತರು ಸಮಾಧಾನ ಪಡಿಸಿ ಸೂಕ್ತ ಚಿಕಿತ್ಸೆ ಭರವಸೆ ನೀಡಿದರು. (ಏಜೆನ್ಸೀಸ್)