

ಚೆನ್ನೈ: ಜನಸಾಮಾನ್ಯರಂತೆ ಸರಳ ಜೀವನ ನಡೆಸುತ್ತಾ, ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾ ಜನರ ಬಳಿಯಲ್ಲಿಯೇ ಇರುವ ಅಪರೂಪದ ಮುಖ್ಯಮಂತ್ರಿಯೆಂದೇ ಪ್ರಸಿದ್ಧರಾದವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್. ಜಿಮ್ ಮಾಡುವ ವಿಡಿಯೋ ಹಾಕುತ್ತಾ, ಸಾಮಾನ್ಯರಂತೆ ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಾ, ಪಾರ್ಕ್‌ನಲ್ಲಿ ಜಾಗಿಂಗ್ ಮಾಡುತ್ತಾ... ಹೀಗೆ ಜನರಿಗೆ ಬಹಳ ಹತ್ತಿರವಾಗಿರುವ ಇವರೀಗ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.
ಅದೇನೆಂದರೆ, ಚೆನ್ನೈನ ಕನ್ನಗಿ ನಗರ ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನಂತರ ಜನರಿಂದ ತುಂಬಿದ್ದ ಬಸ್ ಒಳಗೆ ಹೋಗಿದ್ದಾರೆ. ನೋಡಲು ಥೇಟ್ ಮುಖ್ಯಮಂತ್ರಿ ಸ್ಟಾಲಿನ್ ಅಂತೆಯೇ ಇವರು ಕಾಣಿಸುತ್ತಿದ್ದಾರೆ ಅಲ್ಲವೇ ಎಂದು ಜನರು ಅವರನ್ನೇ ದಿಟ್ಟಿಸಿ ನೋಡಿದ್ದಾರೆ. ಆದರೆ ಇಂಥ ಫುಲ್ ರಶ್ ಬಸ್ಸಿನಲ್ಲಿ ಮುಖ್ಯಮಂತ್ರಿ ಎಂದಾದರೂ ಬರಲು ಸಾಧ್ಯವೇ ಎಂದು ಆ ವ್ಯಕ್ತಿಯನ್ನು ನೋಡಿ ಗುಸುಗುಸು ಮಾತನಾಡುತ್ತಾ ಸುಮ್ಮನಾಗಿದ್ದಾರೆ.
ನಂತರ ಇವರು ಯಾವುದೋ ವ್ಯಕ್ತಿಯಲ್ಲ, ಬದಲಿಗೆ ಸಿಎಂ ಸ್ಟಾಲಿನ್ ಅವರೇ ಎಂದು ಕೆಲವರಿಗೆ ಗೊತ್ತಾದಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆಗಲೇ ಉಳಿದವರಿಗೂ ತಿಳಿದದ್ದು ಇವರು ಯಾರೋ ಅಲ್ಲ, ಬದಲಿಗೆ ಖುದ್ದು ಮುಖ್ಯಮಂತ್ರಿಯೇ ಎಂದು! ನಂತರ ಸ್ಟಾಲಿನ್ ಅವರು ಪ್ರಯಾಣಿಕರನ್ನು ಮಾತನಾಡಿಸಿ, ಮಹಿಳೆಯರಿಗೆ ತಮ್ಮ ಸರ್ಕಾರ ನೀಡಿರುವ ಉಚಿತ ಬಸ್ ಪ್ರಯಾಣ ಸೌಲಭ್ಯಗಳ ಬಗ್ಗೆ ವಿವರಿಸಿದ್ದಾರೆ.
ಈ ವಿಡಿಯೋ ಇದೀಗ ಸಕತ್ ವೈರಲ್ ಆಗಿದ್ದು ಮುಖ್ಯಮಂತ್ರಿಯ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅಂದಹಾಗೆ ಸ್ಟಾಲಿನ್ ಅವರು, ಕರೊನಾ ಲಸಿಕೆ ಅಭಿಯಾನವು ನಗರದಲ್ಲಿ ಯಾವ ಪ್ರಗತಿ ಹಂತದಲ್ಲಿದೆ ಎಂದು ಪರಿಶೀಲನೆಗೆ ಹೊರಟಿದ್ದರು. ಈ ಸಮಯದಲ್ಲಿ ಬಸ್ ಏರಿದ್ದಾರೆ.