

ಬೆಂಗಳೂರು: ಇದೇ 2ನೇ ತಾರೀಖು ಯೂಕ್ರೇನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ನವೀನ್ ಪಾರ್ಥಿವ ಶರೀರ ಇಂದು ನಸುಕಿನಲ್ಲಿ ಬೆಂಗಳೂರನ್ನು ತಲುಪಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೀನ್ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನವೀನ್ ಕುಟುಂಬಸ್ಥರಿಗೆ ಪಾರ್ಥಿವ ಶರೀರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ, ನವೀನ್ ತಂದೆ, ತಾಯಿ ಆತ ಮೆಡಿಕಲ್ ಮುಗಿಸಿ ಬಂದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಮಗನನ್ನು ಸ್ವಾಗತಿಸಬೇಕಿತ್ತು. ಆದರೆ, ಇಂದು ಆತನ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಿರುವುದು ಬಹಳ ನೋವಿನ ಸಂಗತಿ. ಇದೆಂಥ ವಿಧಿಯಾಟ. ಯೋಚನೆ ಮಾಡುವುದಕ್ಕೂ ಕಷ್ಟವಾಗುತ್ತದೆ ಎಂದರು.
ಘಟನೆಯಾದ ಕ್ಷಣದಿಂದ ನವೀನ್ ಕುಟುಂಬದೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆ ನಡೆದ ದಿನವೇ ಪ್ರಧಾನಿ ನರೇಂದ್ರ ಮೋದಿಯವರೂ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದರು. ನಮ್ಮ ಪ್ರಧಾನಿಯವರು ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸಲಹೆ ನೀಡಿದರು. ವಿದೇಶಾಂಗ ಸಚಿವರಾದ ಜೈಶಂಕರ್ ನಮಗೆ ಸಾಕಷ್ಟು ಸಹಾಯ ಮಾಡಿದರು. ಮೊದಲಿಗೆ ನವೀನ್ ಮೃತದೇಹವನ್ನು ರಕ್ಷಣೆ ಮಾಡಲಾಯಿತು ಎಂದು ಸಿಎಂ ಹೇಳಿದರು.
ನವೀನ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದು ದೊಡ್ಡದಲ್ಲ, ಅವರ ಅಣ್ಣನಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಕುಟುಂಬದೊಂದಿಗೆ ಸದಾ ನಿಲ್ಲಲ್ಲಿದ್ದೇವೆ. ನವೀನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ, ನಾನು ಸಹ ಮೃತರ ಸ್ವಗ್ರಾಮಕ್ಕೆ ಹೋಗಿ ಅಂತಿಮ ದರ್ಶನ ಪಡೆಯುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ನವೀನ್ ಸಹೋದರ ಹರ್ಷ ಸೇರಿದಂತೆ ಗ್ರಾಮಸ್ಥರು ಪಾರ್ಥಿವ ಶರೀರ ಪಡೆದುಕೊಂಡು ಸ್ವಗ್ರಾಮಕ್ಕೆ ತೆರಳಿದ್ದಾರೆ. ನವೀನ್ ವೈದ್ಯಕೀಯ ಶಿಕ್ಷಣ ಪಡೆಯಲು ಯೂಕ್ರೇನ್‌ಗೆ ತೆರಳಿದ್ದರು.