ಅಮರನಾಥ ಗುಹೆಯ ಬಳಿ ಆಗಿದ್ದು ಮೇಘಸ್ಫೋಟವಲ್ಲ: ಹಾಗಿದ್ದರೆ ಇನ್ನೇನು? ಹವಾಮಾನ ಇಲಾಖೆ ಹೇಳಿದ್ದಿಷ್ಟು..

amarayatre
Published on

ಕಾಶ್ಮೀರ: ದಕ್ಷಿಣ ಕಾಶ್ಮೀರದ ಅಮರನಾಥ ಗುಹೆ ದೇಗುಲದ ಸಮೀಪ ಭಾರಿ ಮಳೆಯಿಂದ ಆಗಿರುವ ಅನಾಹುತದಿಂದ ಇದಾಗಲೇ 16 ಮಂದಿ ಪ್ರಾಣ ಕಳೆದುಕೊಂಡಿದ್ದು, ಇನ್ನೂ ಅಲ್ಲಿಯ ಭೀಕರತೆ ನಿಂತಿಲ್ಲ. ಮೇಘಸ್ಫೋಟದಿಂದ ಈ ಅನಾಹುತ ನಡೆದಿದೆ ಎಂದೇ ವರದಿಯಾಗುತ್ತಿದೆ. ಆದರೆ ನಿಜವಾಗಿಯೂ ಇದಕ್ಕೆ ಮೇಘಸ್ಫೋಟ (cloudburst) ಎನ್ನಲು ಆಗದು ಎಂದು ಹವಾಮಾನ ಇಲಾಖೆ ಹೇಳಿದೆ.

ಹಾಗಿದ್ದರೆ ಏನಿದು ಮೇಘಸ್ಫೋಟ? ಅಮರನಾಥ ಗುಹೆಯ ಬಳಿ ಆಗಿದ್ದೇನು? ಈ ಅನಾಹುತಕ್ಕೆ ಕಾರಣವೇನು ಎಂಬ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಉತ್ತರ ಇಲ್ಲಿದೆ:

ಒಂದು ಗಂಟೆಯಲ್ಲಿ, ಒಂದು ಪ್ರದೇಶದಲ್ಲಿ 100 ಮಿಮೀಗಿಂತಲೂ ಹೆಚ್ಚು ಮಳೆಯಾದರೆ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಆದರೆ ಅಮರನಾಥದ ಗುಹೆಯ ಸಮೀಪ ಅನಾಹುತ ಸಂಭವಿಸಿರುವ ಜಾಗದಲ್ಲಿ ಘಟನೆ ನಡೆದ ದಿನ ಅಂದರೆ ಶುಕ್ರವಾರ (ಜುಲೈ 1) ಸಂಜೆ 4:30 ರಿಂದ 6:30ರ ನಡುವೆ ಆಗಿದ್ದು 31 ಮಿಮೀ ಮಳೆ. ಆದ್ದರಿಂದ ಇದನ್ನು ಮೋಡಗಳ ಸ್ಫೋಟ ಅಥವಾ ಮೇಘಸ್ಫೋಟ ಎಂದು ಕರೆಯಲು ಆಗುವುದಿಲ್ಲ ಎನ್ನುವುದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಅಮರನಾಥ ಗುಹೆ ದೇಗುಲದ ಬಳಿ ಸ್ವಯಂಚಾಲಿತ ಹವಾಮಾನ ಕೇಂದ್ರವನ್ನು ಹೊಂದಿದೆ. ಇದು ತೀರ್ಥಯಾತ್ರೆಯ ಸಮಯದಲ್ಲಿ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಆದರೆ ಸುತ್ತಮುತ್ತಲಿನ ಪರ್ವತಗಳು ತಮ್ಮ ದುರ್ಗಮತೆಯ ಕಾರಣದಿಂದಾಗಿ ಯಾವುದೇ ಹವಾಮಾನ ನಿಗಾ ಕೇಂದ್ರಗಳನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ಅಮರನಾಥ ಗುಹೆಯ ಮೇಲೆ ಮಾತ್ರ ಹೆಚ್ಚು ಸ್ಥಳೀಕರಣಗೊಂಡ ಮೋಡದಿಂದ ಈ ಘಟನೆ ಸಂಭವಿಸಿದೆ. ಈ ವರ್ಷದ ಆರಂಭದಲ್ಲಿಯೂ ಅಂತಹ ಮಳೆ ಸಂಭವಿಸಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಈ ಸಮಯದಲ್ಲಿ ಇಷ್ಟು ಅನಾಹುತ ಸಂಭವಿಸಿದೆ ಎಂದು ಶ್ರೀನಗರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಸೋನಮ್ ಲೋಟಸ್ ಹೇಳಿದ್ದಾರೆ.

ಇದಾಗಲೇ 16 ಮಂದಿಯ ಮೃತದೇಹ ಸಿಕ್ಕಿದ್ದು, ಅಮರನಾಥ ಗುಹೆಯ ಸಮೀಪವಿರುವ ಟೆಂಟ್‌ಗಳು ಮತ್ತು ಸಮುದಾಯ ಅಡುಗೆ ಮನೆಗಳು ನೀರಿನ ರಭಸದಿಂದ ಹರಿದು ಬಂದ ಮಣ್ಣು ಮತ್ತು ಕಲ್ಲುಗಳಿಂದ ಜಖಂಗೊಂಡಿವೆ ಎಂದು ಅವರು ವಿವರಣೆ ನೀಡಿದ್ದಾರೆ. ಇದಾಗಲೇ ರಕ್ಷಣಾ ಕಾರ್ಯಾಚರಣೆಗೆ ಎಂಟು ಹೆಲಿಕಾಪ್ಟರ್​ಗಳನ್ನು ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net