

ನವದೆಹಲಿ: ಚೀನಾದ ಯುದ್ಧ ವಿಮಾನವೊಂದನ್ನು ಪುಟ್ಟ ತೈವಾನ್‌ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿರುವ ಬಗ್ಗೆ ಭಾರಿ ಸುದ್ದಿಯಾಗಿದೆ.
ತನ್ನ ದೇಶದ ವಾಯುಪ್ರದೇಶದ ನಿಮಯ ಉಲ್ಲಂಘಿಸಿ ಬಂದ ಚೀನಾದ ಸುಖೋಯ್ -35 ಯುದ್ಧ ವಿಮಾನವನ್ನು ತೈವಾನ್‌ನ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ) ಹೊಡೆದುರುಳಿಸಿರುವ ಸುದ್ದಿ ಇದಾಗಿದೆ.
ಹಲವಾರು ದೇಶಗಳ ವಿರೋಧ ಕಟ್ಟಿಕೊಂಡಿರುವ ಚೀನಾಕ್ಕೆ ತಕ್ಕ ಶಾಸ್ತಿಯಾಯ್ತು ಎಂಬ ಸುದ್ದಿ ಟ್ರೆಂಡ್ ಆಗುತ್ತಿದೆ. ರಷ್ಯಾ ನಿರ್ಮಿತ ಸುಖೋಯ್ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ಬಿದ್ದಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಸದ್ಯ ಸುದ್ದಿ ಟ್ವಿಟರ್‌ನಲ್ಲಿ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿದೆ.
ಅನೇಕರು ಚೀನಾ ವಾಯು ಸೇನೆಯ ಸು-35 ತೈವಾನ್‌ನ ವಾಯುಪ್ರದೇಶಕ್ಕೆ ಅಕ್ರಮವಾಗಿ ಬಂದಿದ್ದರಿಂದ ಏರ್ ಡಿಫೆನ್ಸ್ ಸಿಸ್ಟಂ ಮೂಲಕ ತೈವಾನ್ ದೇಶ ಹೊಡೆದುಳಿಸಿದೆ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ತೈವಾನ್ ಬಳಿ ಚೀನಾದ ಸು-35 ಅವಘಡಕ್ಕೆ ತುತ್ತಾಗಿದೆ ಎಂದು ಕೂಡ ಹೇಳಲಾಗುತ್ತಿದೆ.
ಆದರೆ ಚೀನಾ ಆಗಲಿ, ತೈವಾನ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇದುವರೆಗೆ ನೀಡಿಲ್ಲ. ಆದರೂ ಚಿತ್ರವನ್ನು ನೋಡಿರುವವರು ಇದು ತೈವಾನ್‌ನಿಂದಲೇ ಚೀನಾಕ್ಕಾಗಿರುವ ಮುಖಭಂಗ ಎನ್ನುತ್ತಿದ್ದಾರೆ. ಸಾಧಾರಣವಾಗಿ ಸುಖೋಯ್ ಅತ್ಯಾಧುನಿಕ ವಿಮಾನವಾಗಿದ್ದು ಮಿಗ್ ರೀತಿ ಪತನವಾಗುವ ಸಾಧ್ಯತೆ ಕಡಿಮೆ.
ಈ ಕುರಿತು ಟ್ವಿಟರ್‌ನಲ್ಲಿಯೂ ಭಾರಿ ಚರ್ಚೆಯಾಗುತ್ತಿದ್ದು, #Taiwan ಹಾಗೂ #Su-35 ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ರಕ್ಷಣಾ ಪರಿಣತರ ಪ್ರಕಾರ, ತೈವಾನ್ ಚೀನಾದ ಯುದ್ಧ ವಿಮಾನವನ್ನ ಹೊಡೆದುರುಳಿಸಿರುವುದು ನಿಜವಾದರೆ, ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.