

ಗುವಾಂಗ್ಝು (ಚೀನಾ): ಲಾಕ್‌ಡೌನ್ ಘೋಷಣೆಯಾಗುವುದಕ್ಕೂ ಮುನ್ನವೇ ಚೀನಾಕ್ಕೆ ಹೋಗಿ ಅಲ್ಲಿ ಸಿಲುಕಿಕೊಂಡಿರುವ 233 ಭಾರತೀಯರನ್ನು ವಂದೇ ಭಾರತ್ ಮಿಷನ್ ಯೋಜನೆ ಅಡಿ ಭಾರತದಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಶುರುವಾಗಿದೆ.
ಪ್ರವಾಸಕ್ಕೆ ಹೋದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚೀನಾದಲ್ಲಿ ಸಿಲುಕಿಕೊಂಡಿದ್ದರು. ದಿಢೀರ್ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಗಿತ್ತು. ನಂತರ ಲಾಕ್‌ಡೌನ್ ತೆರವುಗೊಂಡರೂ ಕರೊನಾ ವೈರಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತಿಲ್ಲ.
ಈ ನಡುವೆಯೇ ಭಾರತ ಸರ್ಕಾರ ವಂದೇ ಭಾರತ್ ಮಿಷನ್ ಯೋಜನೆಯಡಿ ವಿವಿಧ ದೇಶಗಳಲ್ಲಿ ಸಿಲುಕಿರುವವರನ್ನು ಭಾರತಕ್ಕೆ ಕರೆ ತರುತ್ತಿದೆ.
ಇದೀಗ ಐದನೇ ಪ್ರಯಾಣದ ಅಂಗವಾಗಿ ಚೀನಾ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಶುರುವಾಗಿದೆ. ಗುವಾಂಗ್ಝು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 233 ಭಾರತೀಯರು ವಾಪಸ್ ಆಗಲಿದ್ದಾರೆ.
ಈ ಕುರಿತು ಚೀನಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮಾಹಿತಿ ನೀಡಿದೆ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇವರೆಲ್ಲಾ ಆಗಮಿಸಿರುವುದಾಗಿ ಹೇಳಲಾಗಿದೆ.
ಇದಾಗಲೇ ವಿವಿಧ ದೇಶಗಳ 9 ಲಕ್ಷದ 39 ಸಾವಿರ ಮಂದಿ ಸ್ವದೇಶಕ್ಕೆ ಈ ಯೋಜನೆ ಅಡಿ ವಾಪಸ್ ಆಗಿದ್ದಾರೆ.