ಸತ್ತು ಶವಪೆಟ್ಟಿಗೆ ಸೇರಿದಳು- ವಿಷಯ ತಿಳಿದು ನೆಂಟರಿಷ್ಟರು ಬಂದಾಗ ಎದ್ದು ಪಾರ್ಟಿ ಮಾಡಿದಳು!

lady acting
Published on

ಚಿಲಿ: ತೋಳ ಬಂತು ತೋಳ ಕಥೆಯನ್ನೆಲ್ಲಾ ಕೇಳಿಯೇ ಇರುತ್ತೀರ. ತೋಳವೇನಾದರೂ ತನ್ನ ಮೇಲೆ ಎರಗಿದರೆ ಜನರು ಸಹಾಯಕ್ಕೆ ಬರುತ್ತಾರೋ ಇಲ್ಲೋ ಎಂದು ಪರೀಕ್ಷಿಸಲು ವ್ಯಕ್ತಿಯೊಬ್ಬ ಬೇಕು ಬೇಕಂತೆಲೇ ತೋಳ ಬಂತು ತೋಳ ಎಂದು ಕೂಗುವುದು, ಜನರು ಓಡೋಡಿ ಬಂದು ಸುಳ್ಳು ಎಂದು ತಿಳಿದು ಸಿಟ್ಟಿನಿಂದ ಹೋಗುವುದು, ನಂತರ ನಿಜವಾಗಿಯೂ ತೋಳ ಬಂದಾಗ ಈ ವ್ಯಕ್ತಿ ಕೂಗಿಕೊಂಡರೂ ಅದು ಸುಳ್ಳು ಎಂದು ಯಾರೂ ಬರದೇ ವ್ಯಕ್ತಿ ತೋಳಕ್ಕೆ ಆಹಾರವಾಗುವ ಕಥೆಯಿದು.

ಇಲ್ಲಿ ಏಕಪ್ಪ ಈ ವಿಷಯ ಎಂದರೆ ಇಂಥದ್ದೇ ಒಂದು ನೈಜ ಘಟನೆ ಚಿಲಿಯಲ್ಲಿ ನಡೆದಿದೆ. ಆದರೆ ತೋಳ ಬಂತು ತೋಳ ಕಥೆಗಿಂತ ಇದು ಸ್ವಲ್ಪ ಭಿನ್ನವಾಗಿದೆ. ಇಲ್ಲೊಬ್ಬ ಮಹಿಳೆ ಕೋವಿಡ್‌ನಿಂದ ತಾನೇನಾದರೂ ಸತ್ತು ಹೋದರೆ ಎಷ್ಟು ಜನರು ನೋಡಲು ಬರುತ್ತಾರೆ ಎಂದು ಅರಿಯುವ ಮನಸ್ಸಾಗಿ ಸತ್ತುಹೋದಂತೆ ಮಾಡಿರುವ ಘಟನೆ ಇದು!

ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚು ಜನರು ಗುಂಪುಗೂಡುವುದನ್ನು ಎಲ್ಲಾ ದೇಶಗಳಲ್ಲಿಯೂ ನಿಷೇಧಿಸಲಾಗಿದೆ. ಹೀಗಿರುವಾಗ ತಾನು ಸತ್ತರೆ ಎಷ್ಟು ಜನ ಸೇರಬಹುದು ಎಂದು ನೋಡುವ ಆಸೆ ಈಕೆಗಾಗಿದೆ. ಇದನ್ನು ಪರೀಕ್ಷೆ ಮಾಡಲು ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾಳೆ ಈಕೆ.

ಮಾಯರಾ ಅಲ್ಲೋಂಜಾ ಎಂಬಾಕೆ ಇಂಥದ್ದೊಂದು ಕೃತ್ಯಕ್ಕೆ ಕೈಹಾಕಿದ್ದಾಳೆ. ತಾನು ಸತ್ತಂತೆ ನಟಿಸಿದ್ದಾಳೆ. ನಂತರ ತನ್ನನ್ನು ಶವಪೆಟ್ಟಿಗೆಯಲ್ಲಿ ಇರಿಸುವಂತೆ ಫೋಟೋಗ್ರಾಫರ್‌ ಒಬ್ಬನನ್ನು ಕೇಳಿಕೊಂಡಿರುವ ಈಕೆ, ಸತ್ತ ಮೇಲೆ ಹೇಗೆ ವಿಧಿವಿಧಾನ ಅನುಸರಿಸಲಾಗುತ್ತದೆಯೋ ಅದೇ ರೀತಿ ಮಾಡುವಂತೆ ಆತನಿಗೆ ಹೇಳಿದ್ದಾರೆ. ಆತ ಇವಳು ಹೇಳಿದಂತೆಯಾ ಮಾಡಿ ನಂತರ ‘ಶವ‘ದ ಫೋಟೋ ತೆಗೆದಿದ್ದಾನೆ.

ಇದನ್ನು ಆಕೆಯ ನೆಂಟರಿಷ್ಟರಿಗೆಲ್ಲ ರವಾನೆ ಮಾಡಲಾಗಿದೆ. ಈಕೆ ಸತ್ತೇ ಹೋದಳು ಎಂದುಕೊಂಡ ಹಲವು ಸ್ನೇಹಿತರು ದುಃಖದಿಂದ ಮನೆಗೆ ಬಂದಿದ್ದಾರೆ. ಬಂದವರೆಲ್ಲಾ ಬಿಕ್ಕಿ ಬಿಕ್ಕಿ ಅತ್ತರೆ, ಕೆಲವರು ಮಾಯರಾ ಅಲ್ಲೋಂಜಾ ಬಗ್ಗೆ ಮಾತನಾಡಿಕೊಂಡಿದ್ದಾರೆ. ಸುಮಾರು 4 ಗಂಟೆ ನಂತರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುವ ಹೊತ್ತಿಗೆ ಫಕ್ಕನೆ ಮಾಯರಾ ಅಲ್ಲೋಂಜಾ ಎದ್ದುಕುಳಿತಿದ್ದಾಳೆ.

ಬಂದವರೆಲ್ಲಾ ಕಕ್ಕಾಬಿಕ್ಕಿ. ನಂತರ ಎಲ್ಲರಿಗೂ ವಿಷಯ ತಿಳಿಸಿ, ಇಷ್ಟು ಮಂದಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾಳೆ. ಅವರ ಜತೆ ಪಾರ್ಟಿ ಮಾಡಿ ಎಲ್ಲರನ್ನೂ ಮನೆಗೆ ಕಳಿಸಿಕೊಟ್ಟಿದ್ದಾಳೆ. ಸದ್ಯ ಈ ನಾಟಕದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net