

ಕಲಬುರಗಿ: ಇತ್ತೀಚೆಗೆ ಕೆಲ ಜಿಲ್ಲೆಗಳಲ್ಲಿ ವಿಚಿತ್ರ ಜ್ವರ ಕಾಣಿಸಿಕೊಂಡಿದ್ದು, ಹೆಚ್ಚಾಗಿ ಮಕ್ಕಳೇ ಟಾರ್ಗೆಟ್ ಆಗುತ್ತಿದ್ದಾರೆ. ಇದಾಗಲೇ ಹಲವಾರು ಕಡೆಗಳಲ್ಲಿ ಮಕ್ಕಳು ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ.
ಇದರ ಬೆನ್ನಲ್ಲೇ ಇದರೀಗ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಆನೂರ ಗ್ರಾಮದಲ್ಲಿ ಕಳೆದ 15 ದಿನಗಳ ಅಂತರದಲ್ಲಿ ಮೂವರು ಮಕ್ಕಳು ಜ್ವರದಿಂದ ಮೃತಪಟ್ಟಿದ್ದಾರೆ. ಕುಡಿಯುವ ನೀರಿನಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಒಂದೇ ಗ್ರಾಮದ ಮೂರು ಬಾಲಕಿಯರ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಊರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ದಸ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಈಗ ಮಕ್ಕಳ ಸರದಿ.
ಈ ಬಾಲಕಿಯರು ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇದೇ ರೀತಿ ಹಲವು ಬಾಲಕಿಯರು ಜ್ವರದಿಂದ ಬಳಲುತ್ತಿರುವ ಕಾರಣ ಆನೂರ ಗ್ರಾಮದ ಪಾಲಕರಲ್ಲಿ ಭೀತಿ ಉಂಟಾಗಿದೆ.
ಆನೂರು ಗ್ರಾಮಕ್ಕೆ ಕಲುಷಿತ ಕುಡಿಯುವ ನೀರು ಪುರೈಕೆಯಿಂದಲೆ ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದರೂ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ನಡುವೆಯೇ ಹಲವು ಗ್ರಾಮಸ್ಥರು ಕೂಡ ಅನಾರೋಗ್ಯಪೀಡಿತರಾಗಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.