

ಚಾಮರಾಜನಗರ: ಅಮ್ಮನನ್ನು ತನ್ನ ಕಣ್ಣೆದುರೇ ಕೊಲೆ ಮಾಡಿದ ಅಪ್ಪನ ವಿರುದ್ಧ ಬಾಲಕಿಯೊಬ್ಬಳು ಸಾಕ್ಷಿ ನುಡಿದದ್ದನ್ನು ಪರಿಗಣಿಸಿರುವ ಕೋರ್ಟ್, ಚಾಮರಾಜನಗರದ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದ ತೊಳಚನಾಯಕನೇ ಪತ್ನಿಯ ಕೊಂದ ಕೊಲೆಗಾರ. ಗಿರವಿ ಇಟ್ಟಿದ್ದ ಚಿನ್ನದ ನೆಕ್‌ಲೆಸ್ ಬಿಡಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಈತ ಪತ್ನಿಯ ಕೊಲೆ ಮಾಡಿದ್ದ. ಈತನ ಈ ಕುಕೃತ್ಯಕ್ಕೆ ಬಲಿಯಾದವರು ಪುಷ್ಪಾಬಾಯಿ ಎಂಬ ಮಹಿಳೆ.
ಘಟನೆ ವಿವರ:
ಪುಷ್ಪಾಬಾಯಿ ಮತ್ತು ತೊಳಚನಾಯಕನ ಮದುವೆಯ ಸಮಯದಲ್ಲಿ ಪುಷ್ಪಾ ತವರು ಮನೆಯವರು 20 ಗ್ರಾಂ ತೂಕದ ಚಿನ್ನದ ನೆಕ್‌ಲೆಸ್ ನೀಡಿದ್ದರು. ಇದನ್ನು ಆಕೆಯ ಪತಿ ಅಡವು ಇಟ್ಟಿದ್ದ. ಇದಕ್ಕೆ ಕಾರಣ, ಆತನ ತಮ್ಮ ಅಪಘಾತ ಪ್ರಕರಣವೊಂದರಲ್ಲಿ ಆಟೋ ಚಾಲಕನಿಗೆ ಹಣ ನೀಡಬೇಕಿತ್ತು. ಆ ದಂಡದ ಹಣ ನೀಡಲು ಇದನ್ನು ಅಡವು ಇಟ್ಟು ದುಡ್ಡು ತಂದಿದ್ದ.
ಅದನ್ನು ವಾಪಸ್ ತರುವಂತೆ ಪುಷ್ಪಾ ಗಂಡನಿಗೆ ಹೇಳುತ್ತಿದ್ದರು. ಇದರಿಂದ ಆತ ಪತ್ನಿಗೆ ಕಿರುಕುಳ ಕೊಡಲು ಶುರು ಮಾಡಿದ. ಇದರಿಂದಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. 2017ರಂದು ಈ ಜಗಳ ತಾರರಕ್ಕೇರಿ ಮಗಳ ಎದುರೇ ಪತ್ನಿಯನ್ನು ಕೊಲೆ ಮಾಡಿದ್ದ. ಇದಕ್ಕೆ ಪ್ರಮುಖ ಸಾಕ್ಷಿಯಾಗಿದ್ದವಳು ಎಂಟು ವರ್ಷದ ಮಗಳು.
ಬಾಲಕಿಯ ಸಾಕ್ಷಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಸೆಷನ್ಸ್ ಕೋರ್ಟ್ ತೊಳಚನಾಯಕನಿಗೆ ಜೀವಾವಧಿ ಶಿಕ್ಷೆ ನೀಡಿದೆ.