

ಫ್ಲೋರಿಡಾ: ಯಾರಾದರೂ ದುಡ್ಡು ಕೇಳಿದರೆ ನಮ್ ಮನೆಯಲ್ಲೇನು ದುಡ್ಡು ಪ್ರಿಂಟ್ ಮಾಡ್ತೀವಾ ಅಂತನೋ, ನಮ್ಮನೆಯ ಗಿಡದಲ್ಲಿ ಹಣ ಬೆಳೆಯತ್ತಾ ಅಂತ ಕೇಳೋದು ಸಹಜ. ಆದರೆ ಇಲ್ಲೊಬ್ಬ ಆಸಾಮಿ ಮನೆಯಲ್ಲಿ ದುಡ್ಡು ಪ್ರಿಂಟ್ ಮಾಡದಿದ್ದರೂ ಚೆಕ್‌ಬುಕ್ ಪ್ರಿಂಟ್ ಮಾಡಿ ಅದನ್ನೇ ಬಳಸಿ ಕೋಟಿ ಕೋಟಿ ಮೌಲ್ಯದ ವಸ್ತು ಖರೀದಿ ಮಾಡುತ್ತಿದ್ದ!
ಫ್ಲೋರಿಡಾದ ಈ ಮಹಾ ಖದೀಮನ ಹೆಸರು ಕೇಸಿ ವಿಲಿಯಂ ಕೆಲ್ಲಿ, 42 ವರ್ಷ ವಯಸ್ಸಿನ ಕೆಲ್ಲಿ, ಒಂದು ಕೋಟಿ ರೂಪಾಯಿ ಐಷಾರಾಮಿ ಕಾರು ಕೂಡ ಇದೇ ಚೆಕ್ ಬಳಸಿ, ಮಾರಾಟಗಾರರಿಗೆ ಟೋಪಿ ಹಾಕಿ ಖರೀದಿಯನ್ನೂ ಮಾಡಿಬಿಟ್ಟಿದ್ದ! ಅದಷ್ಟೇ ಅಲ್ಲದೇ ಇದೇ ಚೆಕ್ ಬಳಸಿ ಹಲವಾರು ವ್ಯವಹಾರಗಳನ್ನೂ ಮಾಡುತ್ತಿದ್ದ ಈತ.
ಈತನ ವೇಷ ಭೂಷಣ ನೋಡಿದ ಮಾರಾಟಗಾರರು ಇವನು ನಿಜವಾಗಿಯೂ ಕೋಟ್ಯಧಿಪತಿಯೇ ಇರಬೇಕು ಎಂದುಕೊಂಡು ಅವನು ಕೊಟ್ಟ ಚೆಕ್ ಅನ್ನು ಮತ್ತೊಮ್ಮೆ ಸರಿಯಾಗಿ ನೋಡದೇ ಪಡೆದುಕೊಂಡುಬಿಡುತ್ತಿದ್ದರು. ಅಷ್ಟಕ್ಕೂ ಅವನು ಪ್ರಿಂಟ್ ಮಾಡುತ್ತಿದ್ದ ಚೆಕ್‌ಬುಕ್ ಥೇಟ್ ಅಲ್ಲಿನ ಬ್ಯಾಂಕ್ ಚೆಕ್‌ಬುಕ್ ರೂಪದಲ್ಲಿಯೇ ಇರುತ್ತಿದ್ದುದರಿಂದ ಮಾರಾಟಗಾರರಿಗೂ ಸಂದೇಹ ಬರುತ್ತಿರಲಿಲ್ಲ.
ನಂತರ ಚೆಕ್ ಅನ್ನು ಬ್ಯಾಂಕ್‌ಗೆ ಹಾಕುವಾಗಲೇ ತಾವು ಮೋಸ ಹೋಗಿರುವುದು ವ್ಯಾಪಾರಿಗಳಿಗೆ ತಿಳಿಯುತ್ತಿತ್ತು. ಆದರೆ ಈತನ ವಿಳಾಸ ಪತ್ತೆ ಮಾಡುವುದು ಕಷ್ಟವಾಗಿ ವ್ಯಾಪಾರಿಗಳು, ಮಾರಾಟಗಾರರು ತಲೆತಲೆ ಚಚ್ಚಿಕೊಳ್ಳಬೇಕಿತ್ತು.
ಹೀಗೆ ಸಣ್ಣ ಪುಟ್ಟ ಮೋಸ ಮಾಡಿ ನುಣುಚಿಕೊಳ್ಳುತ್ತಿದ್ದ ಕೆಲ್ಲಿ ಅದೊಮ್ಮೆ ದೊಡ್ಡದಕ್ಕೇ ಗಾಳಹಾಕುವ ಎಂದುಕೊಂಡು ಒಂದು ಕೋಟಿ ಮೌಲ್ಯದ ಪೋರ್ಷೆ ಕಾರು ಖರೀದಿ ಮಾಡಿದ್ದಾನೆ. ಕಾರಿನ ಷೋರೂಂನವರೂ ಟೋಪಿ ಬಿದ್ದಿದ್ದಾರೆ.
ಕೆಲ್ಲಿ ಜುಲೈ 27ರಂದು ಫ್ಲೋರಿಡಾದ ಒಕಲೂಸಾ ಕೌಂಟಿ ನಗರಕ್ಕೆ ಹೋಗಿದ್ದಾನೆ. ಅಲ್ಲಿ ಪೋರ್ಷೆ ಡೆಸ್ಟಿನ್ ಷೋರೂಮ್‍ಗೆ ಹೋಗಿ, ಪೋರ್ಷೆ 911 ಟರ್ಬೋ ಎಂಬ ಕಾರನ್ನು ಖರೀದಿ ಮಾಡಿದ್ದಾನೆ. ಖರೀದಿ ವೇಳೆ 1 ಕೋಟಿ 30 ಲಕ್ಷ ಮೌಲ್ಯದ ಚೆಕ್ ನೀಡಿದ್ದಾನೆ. ಇದನ್ನು ನಕಲಿ ಎಂದು ತಿಳಿಯದ ಶೋರೂಮ್ ಸಿಬ್ಬಂದಿ ಆತನಿಗೆ ಕಾರು ಕೊಟ್ಟು ಕಳುಹಿಸಿದ್ದಾರೆ.
ಇದಾದ ನಂತರ ಷೋರೂಮ್ ಸಿಬ್ಬಂದಿ ಚೆಕ್ ಅನ್ನು ತೆಗೆದುಕೊಂಡು ಬ್ಯಾಂಕ್‍ಗೆ ಹೋದಾಗ, ಇದು ನಕಲಿ ಚೆಕ್ ಎಂದು ತಿಳಿದು ಬಂದಿದೆ. ಆಗ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈತನ ಪತ್ತೆ ಮಾತ್ರ ಆಗಲೇ ಇಲ್ಲ.
ಆದರೆ, ಕೆಲ್ಲಿ ಮಾತ್ರ ತನ್ನ ಕಳ್ಳತನಕ್ಕೆ ತಾನೇ ಶಹಭಾಸ್‌ಗಿರಿ ಕೊಟ್ಟುಕೊಂಡು, ಷೋರೂಂ ಮಾಲೀಕನನ್ನೇ ಯಾಮಾರಿಸಿದ್ದ ಖುಷಿಯಲ್ಲಿ, ತನ್ನ ಕಾರಿನ ಜತೆ ಫೋಟೋ ತೆಗೆದುಕೊಂಡು ಫೇಸ್‌ಬುಕ್‌ಗೆ ಹಾಕಿಕೊಂಡಿದ್ದಾನೆ.
ಈತನಿಗಾಗಿ ಬಲೆ ಬೀಸಿದ್ದ ಪೊಲೀಸರು ಕೆಲ್ಲಿಯ ಫೇಸ್‌ಬುಕ್ ನೋಡಿದ್ದಾರೆ. ಆದರೆ ಈತನ ಪತ್ತೆ ಮಾತ್ರ ಆಗಲಿಲ್ಲ. ಆ ಫೇಸ್‌ಬುಕ್ ಸಹಾಯ ಪಡೆದ ಪೊಲೀಸರು ಈತನ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ದೊಡ್ಡ ದೊಡ್ಡ ಷೋರೂಮ್‌ಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಇದರ ಅರಿವು ಇಲ್ಲದಿದ್ದ ಕೆಲ್ಲಿ, ಬಹು ದುಬಾರಿಯ ರೋಲೆಕ್ಸ್ ವಾಚ್ ಖರೀದಿ ಮಾಡಲು ಹೋಗಿದ್ದ. ಇದೇ ನಕಲಿ ಚೆಕ್ ಆತ ನೀಡಿದ್ದ. ಹೀಗೊಬ್ಬ ಮೋಸಗಾರ ಬರಬಹುದು ಎಂದು ಮೊದಲೇ ಅಲರ್ಟ್ ಆಗಿದ್ದ ಷೋರೂಂ ಸಿಬ್ಬಂದಿ, ಆ ಚೆಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆಗ ಅದು ನಕಲಿ ಎಂಬುದು ತಿಳಿದುಬಂದಿದೆ.
ವಾಚ್ ತರುತ್ತೇನೆ ಎಂದು ಕೆಲ್ಲಿಯನ್ನು ಅಲ್ಲಿಯೇ ಕುಳ್ಳರಿಸಿ ಒಳಗಡೆ ಹೋಗಿ ಪೊಲೀಸರಿಗೆ ಕರೆ ಮಾಡಿದ್ದಾರೆ ಸಿಬ್ಬಂದಿ. ಹೀಗೆ ಬಂದ ಪೊಲೀಸರು ಆತನನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.