

ನವದೆಹಲಿ: ಇಡೀ ವಿಶ್ವವೇ ಕಣ್ಣುನೆಟ್ಟಿರುವ ಭಾರತದ ಮಹತ್ವದ ಚಂದ್ರಯಾನ-3 ಯೋಜನೆ ಮೇಲೆ ಕರೊನಾ ನೆರಳು ಬಿದ್ದಿದೆ. ಈ ವರ್ಷ ನಡೆಯಬೇಕಿದ್ದ ಚಂದ್ರಯಾನ-3 ಯೋಜನೆಯನ್ನು 2021ಕ್ಕೆ ಮುಂದೂಡಲಾಗಿದೆ.
ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಇಸ್ರೋದ ಮೊದಲ ಚಂದ್ರಯಾನ ಯೋಜನೆ ಶಶಿಯ ಅಂಗಳದಲ್ಲಿ ನೀರಿನ ಅಂಶವಿರುವುದನ್ನು ಪತ್ತೆಹಚ್ಚಿತ್ತು. ಅದಲ್ಲದೆ ಚಂದ್ರನ ಧ್ರುವಗಳ ಉದ್ದಕ್ಕೂ ತುಕ್ಕು ಹಿಡಿಯಬಹುದೆಂದು ಸೂಚಿಸುವ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಚಂದ್ರನ ದಕ್ಷಿಣ ಧ್ರುವ ಭಾಗವನ್ನು ಜಾಲಾಡಲು ಹೊರಟ ಎರಡನೇ ಚಂದ್ರಯಾನವು ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲು ವಿಫಲವಾದರೂ ಅದರ ಆರ್ಬಿಟರ್ ಈಗಲೂ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಮೇಲಿನ ಕಕ್ಷೆಯೊಂದರಿಂದ ಈ ಆರ್ಬಿಟರ್ ಕೆಲ ಮಹತ್ವದ ಡಾಟಾಗಳನ್ನು ಭೂಮಿಗೆ ರವಾನಿಸುತ್ತಿದೆ.
ಈ ಎರಡನೇ ಯಾನದಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಇದು ಕಾಲಿರಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಕೊಂಚ ಎಡವಟ್ಟಾಗಿ ಲ್ಯಾಂಡರ್ ನಿಯಂತ್ರಣ ತಪ್ಪಿ ಕೆಳಗೆ ಕುಸಿದುಬಿತ್ತು. ಆದರೆ, ಚಂದ್ರನ ಕಕ್ಷೆಯ ಮೇಲಿದ್ದ ಆರ್ಬಿಟರ್ ಸುರಕ್ಷಿತವಾಗಿದ್ದು, ಅಲ್ಲಿಂದಲೇ ಚಂದ್ರನ ಚಿತ್ರಗಳನ್ನ ಸೆರೆ ಹಿಡಿದು ಇಸ್ರೋದ ಕೇಂದ್ರಕ್ಕೆ ರವಾನಿಸುತ್ತಿದೆ.
ಇದರ ಬೆನ್ನಲ್ಲೇ ಚಂದ್ರಯಾನ-3 ಯೋಜನೆಗೆ ಸಕಲ ಸಿದ್ಧತೆ ನಡೆಸಲಾಗಿತ್ತು. ಈ ವರ್ಷದ ಅಂತ್ಯದಲ್ಲಿ ಉಡಾವಣೆಯಾಗಬೇಕಿತ್ತು. ಆದರೆ 2021ರ ಆರಂಭದಲ್ಲಿ ಚಂದ್ರಯಾನ-3 ನೌಕೆ ಚಂದ್ರನತ್ತ ಹಾರಲಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು, ಭಾರತದ ಪ್ರಪ್ರಥಮ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿಯೂ ಭರದಿಂದ ಸಾಗಿದೆ. ಇದರ ಗಗನಯಾತ್ರಿಗಳ ತರಬೇತಿ ಕಾರ್ಯಗಳು ಚಾಲನೆಯಲ್ಲಿವೆ. ಕೋವಿಡ್ ಕಾರಣದಿಂದ ತುಸು ಹಿನ್ನಡೆಯಾದರೂ 2022ರ ಆಸುಪಾಸಿನ ವೇಳೆಗೆ ಮಾನವಸಹಿತ ಗಗನಯಾನ ಲಾಂಚ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.