

ಚಾಮರಾಜನಗರ: ಕೊಳ್ಳೇಗಾಲ ನಗರಸಭೆಯ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಸದಸ್ಯರನ್ನು ಅನರ್ಹಗೊಳಿಸಿ ಸೆ.6 ರಂದು ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಅನಹರು ಹೈಕೋರ್ಟ್ ಮೊರೆ ಹೋಗಿದ್ದರು.
2020ರ ಅಕ್ಟೋಬರ್ 29 ರಂದು ನಡೆದಿದ್ದ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ನಡೆದಿದ್ದ ಚುನಾವಣೆ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಬಿಎಸ್ಪಿ ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಮ್ಮ ಸ್ಪರ್ಧಿಸಿದ್ದರೆ, ಬಿಎಸ್ಪಿಯಿಂದ ಪಕ್ಷದ ಅಭ್ಯರ್ಥಿಯಾಗಿ ಜಯಮೇರಿ ಸ್ಪರ್ಧಿಸಿದ್ದರು. ಪಕ್ಷದ ಅಭ್ಯರ್ಥಿ ಜಯಮೇರಿಗೆ ಮತ ಚಲಾಯಿಸುವಂತೆ ಬಿಎಸ್ಪಿ ವಿಪ್ ಜಾರಿಗೊಳಿಸಿತ್ತು. ಆದರೆ ವಿಪ್ ಉಲ್ಲಂಘಿಸಿ ಬಂಡಾಯ ಅಭ್ಯರ್ಥಿಗೆ ಬಿಎಸ್ಪಿ ಸದಸ್ಯರು ಮತ ಚಲಾಯಿಸಿದ್ದರು.
ಬಿಜೆಪಿ ಬೆಂಬಲ ಪಡೆದು ಬಂಡಾಯ ಅಭ್ಯರ್ಥಿ ಗಂಗಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಬಿಎಸ್‌ಪಿಯ ಅಧಿಕೃತ ಅಭ್ಯರ್ಥಿಗೆ ಸೋಲು ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಜಯಮೇರಿ ದೂರು ನೀಡಿದ್ದರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದಿದೆ.