

ನವದೆಹಲಿ: ಶತಕೋಟ್ಯಧಿಪತಿ, ವಿಶ್ವದ ಅಗ್ರ ಶ್ರೀಮಂತ ಉದ್ಯಮಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡಗಳು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡ, ತಾಜ್‍ಮಹಲ್ ಹೋಟೆಲ್, ಓಮನ್‍ನ ಸುಲ್ತಾನನ ಅರಮನೆ ಮತ್ತು ಇನ್ನೂ ಅನೇಕ ಐಕಾನಿಕ್ ರಚನೆಗಳ ನಿರ್ಮಾಣದ ಕೀರ್ತಿ ಪಡೆದ ಪದ್ಮಭೂಷಣ ಪಲ್ಲೊಂಜಿ ಮಿಸ್ತ್ರಿ ನಿಧನರಾಗಿದ್ದಾರೆ. ಇವರಿಗೆ 93 ವರ್ಷ ವಯಸ್ಸಾಗಿತ್ತು.
ಸೋಮವಾರ ತಡರಾತ್ರಿ ಮುಂಬೈನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಇವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಅಧ್ಯಕ್ಷರೂ ಆಗಿದ್ದ ಮಿಸ್ತ್ರಿ ಅವರು, ರಿಯಲ್ ಎಸ್ಟೇಟ್, ಪವರ್, ಟೆಕ್ಸ್‌ಟೈಲ್ಸ್, ಪಬ್ಲಿಕೇಶನ್ಸ್, ಶಿಪ್ಪಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಅಮೋಘ ಕೊಡುಗೆ ನೀಡಿದ್ದಾರೆ. ಕೈಗಾರಿಕೋದ್ಯಮಿಯಾಗಿ ನೀಡಿದ ಕೊಡುಗೆಗಾಗಿ 2016 ರಲ್ಲಿ ಮಿಸ್ತ್ರಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
ಫೋರ್ಬ್ಸ್ ಇತ್ತೀಚಿನ ಮಾಹಿತಿಯ ಪ್ರಕಾರ, ಪಲ್ಲೊಂಜಿ ಅವರ ಒಟ್ಟು ಸಂಪತ್ತು 1 ಲಕ್ಷ ಕೋಟಿ ರೂ.ಗೂ ಅಧಿಕ. ಟಾಟಾ ಗ್ರೂಪ್ ಮುಖ್ಯಸ್ಥರಾದ ಸೈರಸ್ ಮಿಸ್ತ್ರಿ ಅವರ ತಂದೆಯಾಗಿರುವ ಪಲ್ಲೊಂಜಿ, ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 125ನೇ ಸ್ಥಾನದಲ್ಲಿದ್ದು, ಟಾಟಾ ಸನ್ಸ್‌ನಲ್ಲಿ ಶೇ.18.4ರಷ್ಟು ಪಾಲುದಾರಿಕೆ ಹೊಂದಿದ್ದಾರೆ. 1865ರಲ್ಲಿ ಸ್ಥಾಪನೆಯಾದ ಶಾಪೂರ್ಜಿ ಪಲೋಂಜಿ ಸಮೂಹವು ಎಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಜಲ, ಇಂಧನ ಹಾಗೂ ಹಣಕಾಸು ಸೇವೆಗಳನ್ನು ನೀಡುತ್ತಿದೆ.
ಪಲ್ಲೊಂಜಿ ಮಿಸ್ತ್ರಿ ಅವರ ಕಿರಿಯ ಪುತ್ರ ಸೈರಸ್ ಮಿಸ್ತ್ರಿ ಅವರು 2012-2016 ರವರೆಗೆ ಟಾಟಾ ಸನ್ಸ್‍ನ ಅಧ್ಯಕ್ಷರಾಗಿದ್ದರು. ಪಲ್ಲೊಂಜಿ ಮಿಸ್ತ್ರಿ ಅವರಿಗೆ ಆಲೂ ಮಿಸ್ತ್ರಿ ಮತ್ತು ಲೈಲಾ ಮಿಸ್ತ್ರಿ ಪುತ್ರಿಯರಿದ್ದಾರೆ.