

ಕೌಲಾಲಂಪುರ (ಮಲೇಷಿಯಾ): ಸಾವು, ಆಪತ್ತು ಅಂದರೆ ಹಾಗೆನೇ. ಯಾರಿಗೂ ಕೇಳಿ ಬರಲ್ಲ, ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಆಪತ್ತು ಹುಡುಕಿ ಬರುತ್ತದೆ. ಫುಟ್ಪಾಥ್ ಮೇಲೆ ಸರಿಯಾಗಿ ನಡೆದುಕೊಂಡು ಹೋಗುತ್ತಿದ್ದರೂ ವಾಹನ ಚಲಾಯಿಸಿ ಸಾವು ತರುವುದು, ವಾಹನದಲ್ಲಿ ಸರಿಯಾಗಿಯೇ ಹೋಗುತ್ತಿದ್ದರೂ ಅಡ್ಡಾದಿಡ್ಡಿ ಬರುವವರು ಗುದ್ದುವುದು... ಹೀಗೆ ಅಪಾಯಗಳು ಹೀಗೆಯೇ ಬರುತ್ತವೆ ಎಂದು ಹೇಳುವುದು ಕಷ್ಟ. ಒಂದೇ ಒಂದು ಸೆಕೆಂಡ್ ಹೆಚ್ಚೂ ಕಮ್ಮಿಯಾಗಿದ್ದರೂ ಜೀವ ಉಳಿಯುತ್ತಿತ್ತು ಎಂದು ಅದೆಷ್ಟೋ ಬಾರಿ ಹೇಳಿಕೊಳ್ಳುವುದು ಉಂಟು.
ಅಂಥದ್ದೇ ಒಂದು ದುರ್ಘಟನೆ ಮಲೇಷಿಯಾದಲ್ಲಿ ನಡೆದಿದೆ. ಇಂಥ ಅನೇಕ ಘಟನೆಗಳು ನಡೆಯುತ್ತಿದ್ದರೂ ಸಿಸಿವಿಟಿಯಲ್ಲಿ ಇದರ ವಿಡಿಯೋ ಸೆರೆ ಸಿಕ್ಕಿರುವ ಹಿನ್ನೆಲೆಯಲ್ಲಿ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನಾವು ನೋಡುವುದು ಏನೆಂದರೆ, ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಬೈಕ್ ಹಿಂದುಗಡೆ ಕುಳಿತು ಹೋಗುತ್ತಿದ್ದಾರೆ. ಆಗ ಏಕಾಏಕಿ ಬೈಕ್ನಿಂದ ಧೊಪ್ ಎಂದು ಬಿದ್ದಿದ್ದಾರೆ. ಇದಕ್ಕೆ ಕಾರಣ, ಅವರ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿರುವುದು!
ತೆಂಗಿನಕಾಯಿ ಬಿದ್ದ ರಭಸಕ್ಕೆ ಆಯತಪ್ಪಿ ಮಹಿಳೆ ನೆಲಕ್ಕುರುಳಿದ್ದಾರೆ. ತಲೆಗೆ ಹೆಲ್ಮೆಟ್ ಇದ್ದುದರಿಂದ ಪ್ರಾಣಕ್ಕೆ ಅಪಾಯವಾಗಲಿಲ್ಲ, ಅಷ್ಟೇ ಅಲ್ಲದೇ ಆ ಸಮಯದಲ್ಲಿ ಹಿಂದುಗಡೆಯಿಂದ ಯಾವುದೇ ವಾಹನಗಳು ಬರುತ್ತಿರಲಿಲ್ಲ. ಇಲ್ಲದಿದ್ದರೆ ಮಹಿಳೆ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.
ಕೆಲವು ಸೆಕೆಂಡುಗಳ ಈ ವಿಡಿಯೋ ಭಾರಿ ವೈರಲ್ ಆಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಅದರ ವಿಡಿಯೋ ಇಲ್ಲಿದೆ ನೋಡಿ: ಕೃಪೆ ENTERTAINMENT TREE