

ನವದೆಹಲಿ: ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್ ಆಗಿ ಕೆಲಸ ನಿರ್ವಹಿಸುವುದು ಎಂದರ ಅದು ಬಹಳ ದುಸ್ತರವಾಗಿರುವ ಕೆಲಸ. ಅದಕ್ಕಾಗಿಯೇ ಈ ಹುದ್ದೆ ಏರಲು ಸಾಕಷ್ಟು ಪದವಿ, ಅನುಭವಗಳ ಅಗತ್ಯವಿದೆ.
ಆದರೆ 18 ವರ್ಷದ ಯುವತಿಯೊಬ್ಬಳು ಈ ಹುದ್ದೆಗೆ ಏರಿದ್ದಾಳೆ!
ಈಕೆಯ ಹೆಸರು ಚೈತನ್ಯಾ ವೆಂಕಟೇಶ್ವರನ್, ದೆಹಲಿಯ ವಿದ್ಯಾರ್ಥಿಯೀಕೆ. ಅಷ್ಟಕ್ಕೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಉನ್ನತ ಹುದ್ದೆ ಏರಲು ಹೇಗೆ ಸಾಧ್ಯವಾಯಿತು ಎಂದರೆ ಅದಕ್ಕೆ ಕಾರಣ, 'ಹೈ ಕಮಿಷನರ್ ಫಾರ್ ಎ ಡೇ' ಸ್ಪರ್ಧೆಯಲ್ಲಿ ಈಕೆ ವಿಜೇತೆಯಾದುದು.
ಚೈತನ್ಯಾ ಈ ಹುದ್ದೆಗಾಗಿ ನಡೆದಿರುವ ಸ್ಪರ್ಧೆಯಲ್ಲಿ ವಿಜೇತೆಯಾಗುವ ಮೂಲಕ ಒಂದು ದಿನದ ಮಟ್ಟಿಗೆ ಹೈಕಮಿಷನರ್ ಹುದ್ದೆಯನ್ನು ಅಲಂಕರಿಸಿದ್ದಾಳೆ. ಅಕ್ಟೋಬರ್ 11 ರಂದು ನಡೆಯುವ ಅಂತಾರಾಷ್ಟ್ರೀಯ ಬಾಲಕಿಯರ ದಿನಾಚರಣೆಯ ಸಂಭ್ರಮದಲ್ಲಿ ಯುಕೆ ಮಿಷನ್ ನಡೆಸುತ್ತಿರುವ ವಾರ್ಷಿಕ ಸ್ಪರ್ಧೆಯಲ್ಲಿ ಬ್ರಿಟಿಷ್ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಾಲ್ಕನೇ ಯುವತಿ ಈಕೆ ಎಂದು ಬ್ರಿಟಿಷ್ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.
18ರಿಂದ 23 ವರ್ಷ ವಯಸ್ಸಿನ ಭಾರತೀಯ ಯುವತಿಯರನ್ನು ಈ ಸ್ಪರ್ಧೆಗೆ ಕರೆಯಲಾಗುತ್ತದೆ. ಅದರಲ್ಲಿ ಚೈತನ್ಯಾ ವಿಜೇತೆಯಾಗಿದ್ದಳು. ಇಂಗ್ಲೆಂಡ್ನಲ್ಲಿರುವ ಭಾರತದ ಹಿರಿಯ-ರಾಜತಾಂತ್ರಿಕರಾಗಿ ಕಳೆಯಲು ಒಂದು ದಿನದ ಅವಕಾಶವನ್ನು ಈಕೆಗೆ ನೀಡಲಾಗಿತ್ತು.
ಬ್ರಿಟನ್‌ನ ಉನ್ನತ ರಾಜತಾಂತ್ರಿಕರಾಗಿ ಚೈತನ್ಯ ಅವರು ಹೈಕಮಿಷನ್ ವಿಭಾಗದ ಮುಖ್ಯಸ್ಥರಿಗೆ ಕಾರ್ಯಗಳನ್ನು ಹಸ್ತಾಂತರಿಸುವುದು, ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದು, ಪತ್ರಿಕಾ ಸಭೆ ನಡೆಸುವುದು ಇತ್ಯಾದಿ ಕೆಲಸವನ್ನು ಈಕೆಗೆ ಒಂದು ದಿನದ ಮಟ್ಟಿಗೆ ನೀಡಲಾಗುತ್ತದೆ. ಇದನ್ನೆಲ್ಲಾ ಚೈತನ್ಯಾ ಸಮರ್ಥವಾಗಿ ನಿಭಾಯಿಸಿದ್ದಾಳೆ.
ಇಂಥದ್ದೊಂದು ಉನ್ನತ ಹುದ್ದೆ ಏರುವ ಕನಸನ್ನು ಬಿಚ್ಚಿಡುವ ಚೈತನ್ಯಾ, ನಾನು ಚಿಕ್ಕವಳಿದ್ದಾಗ ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ, ಅಲ್ಲಿಯೇ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾಗ ಇಂಥದ್ದೊಂದು ಆಸಕ್ತಿ ಹುಟ್ಟಿತ್ತು. ಒಂದು ದಿನ ಬ್ರಿಟಿಷ್ ಹೈಕಮಿಷನರ್ ಆಗುವ ಆಸೆ ಹುಟ್ಟಿದ್ದೂ ಆಗಲೇ. ಅಂಥದ್ದೊಂದು ಸುವರ್ಣಾವಕಾಶ ಈಗ ಲಭಿಸಿದೆ, ಇದರಿಂದ ತುಂಬಾ ರೋಮಾಂಚನಗೊಂಡಿದ್ದೇನೆ ಎಂದಿದ್ದಾಳೆ.