

ಬೆಂಗಳೂರು: ಕರ್ನಾಟಕದ ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ವಿವಿಧ ದೇಶಗಳಲ್ಲಿ ಇರುವ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಬ್ರಿಟನ್ನ ಕೋರ್ಟ್ ಆದೇಶಿಸಿದೆ.
ಅಬುಧಾಬಿ ಕಮರ್ಷಿಲ್ ಬ್ಯಾಂಕ್ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಅಬುಧಾಬಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಎನ್ಎಂಸಿ ಆರೋಗ್ಯ ಸೇವಾ ಕಂಪನಿಯಲ್ಲಿನ ಹಣಕಾಸು ಅವ್ಯವಹಾರ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಹೆಲ್ತ್ ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7500 ಕೋಟಿ ರೂಪಾಯಿಗೂ ಹೆಚ್ಚು ಸಾಲ ನೀಡಿತ್ತು. ಈ ಸಾಲವನ್ನು ಬಿ.ಆರ್. ಶೆಟ್ಟಿ ಮರುಪಾವತಿ ಮಾಡಿರಲಿಲ್ಲ.
ಇಷ್ಟೇ ಅಲ್ಲದೇ ಇತರ ಸ್ಥಳೀಯ ಬಾಂಕುಗಳಿಗೆ ನೀಡಬೇಕಿರುವ ಸಾಲದ ಹಣ ಸೇರಿ ಒಟ್ಟು 28 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರದಲ್ಲಿ ಭಾಗಿ ಆಗಿರುವ ಆರೋಪವನ್ನು ಎನ್ಎಂಸಿ ಆಸ್ಪತ್ರೆಗಳ ಸಮೂಹದ ವಿರುದ್ಧ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ 2020 ರ ಏಪ್ರಿಲ್ 15 ರಂದು ಶೆಟ್ಟಿ ಸೇರಿದಂತೆ ಇತರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿತ್ತು.
ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ ಇಂಗ್ಲೆಂಡ್ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಇಂಗ್ಲೆಂಡ್ ಕೋರ್ಟ್ ಬಿ.ಆರ್. ಶೆಟ್ಟಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.
ಉಡುಪಿ ಮೂಲದವರಾದ ಬಿ.ಆರ್. ಶೆಟ್ಟಿಯವರು 1975ರಲ್ಲಿ ಎನ್ಎಂಸಿ ಆರೋಗ್ಯ ಸೇವೆ ಸಂಸ್ಥೆಯನ್ನು ಆರಂಭಿಸಿದ್ದರು. ಇದು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಅತಿದೊಡ್ಡ ಖಾಸಗಿ ಆರೋಗ್ಯ ಸೇವಾ ಸಂಸ್ಥೆ ಎನಿಸಿಕೊಂಡಿದೆ.
ಮತ್ತೊಂದೆಡೆ, ತಮ್ಮ ಪ್ರಯಾಣವನ್ನು ನಿರ್ಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಹೊರಡಿಸಿರುವ ಲುಕ್ಔಟ್ ಸುತ್ತೋಲೆ ಪ್ರಶ್ನಿಸಿ ಉದ್ಯಮಿ ಬಿ.ಆರ್.ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಸಾವಿರಾರು ಕೋಟಿ ರೂಪಾಯಿಗಳನ್ನು ಬಿ.ಆರ್.ಶೆಟ್ಟಿ ಪಾವತಿ ಮಾಡಬೇಕಿದೆ. ಈ ಹಣ ದೇಶದ ಮತ್ತು ಠೇವಣಿದಾರರಿಗೆ ಸೇರಿದ್ದಾಗಿದೆ. ಅದನ್ನು ವಿದೇಶದಲ್ಲಿ ವ್ಯವಹಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಅಂಶವನ್ನು ಕಡೆಗಣಿಸಲು ಆಗುವುದಿಲ್ಲ' ಎಂದು ಪೀಠ ಹೇಳಿದೆ.
2020ರ ಫೆಬ್ರುವರಿಯಲ್ಲಿ ಶೆಟ್ಟಿ ಭಾರತಕ್ಕೆ ಬಂದಿದ್ದರು. ನವೆಂಬರ್ 14ರಂದು ಅಬುದಾಬಿಗೆ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಹತ್ತಲು ಅನುಮತಿಯನ್ನು ವಲಸೆ ಅಧಿಕಾರಿಗಳು ನಿರಾಕರಿಸಿದ್ದರು. ಈ ರೀತಿ ಸುತ್ತೋಲೆ ಹೊರಡಿಸಿರುವುದು ನಿಯಮ ಬಾಹಿರ, ಪ್ರಯಾಣ ಮಾಡುವುದು ತಮ್ಮ ಮೂಲ ಹಕ್ಕು ಎಂದು ಶೆಟ್ಟಿ ಹೇಳಿದ್ದರು. ಆದರೆ ಕೋರ್ಟ್ ಇದನ್ನು ಮಾನ್ಯ ಮಾಡಲಿಲ್ಲ.