

ಚಿಕಾಗೊ: ಮೊದಲ ಬಾರಿಯ ಭೇಟಿ, ನೋಟ, ಸ್ಪರ್ಶ, ಮೊದಲ ಕಹಿ-ಸಿಹಿ ಅನುಭವ.. ಇವೆಲ್ಲವನ್ನೂ ಪ್ರೇಮಿಗಳು, ದಂಪತಿ ಮರೆಯಲು ಸಾಧ್ಯವಿಲ್ಲ. ಜೀವನಪರ್ಯಂತ ನೆನಪಿರುವ ಘಟನೆಗಳು ಇವು. ಅಂಥದ್ದೇ ಒಂದು ಅಪೂರ್ವದ ಗಳಿಗೆಯನ್ನು ಸ್ಮರಿಸಿಕೊಂಡ ದಂಪತಿ ಹೋಟೆಲ್ ಸಿಬ್ಬಂದಿಗೆ ನೀಡಿದ ಗಿಫ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
20 ವರ್ಷಗಳ ಹಿಂದೆ ಇದೇ ರೆಸ್ಟೋರೆಂಟ್ನಲ್ಲಿ ಈಗ ದಂಪತಿ ಮೊದಲ ಬಾರಿಗೆ ಡೇಟಿಂಗ್ ಮಾಡಿದ್ದರು. ಇವರು ಮೊದಲು ಭೇಟಿಯಾಗಿದ್ದ ಸ್ಥಳ ಇದೇ ಆಗಿರುವ ಕಾರಣಕ್ಕೆ ಅದರ ನೆನಪಿಗಾಗಿ 20ನೇ ವಾರ್ಷಿಕೋತ್ಸವದಂದು ಇದೇ ರೆಸ್ಟೋರೆಂಟ್ಗೆ ಭೇಟಿ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೇ 20ನೇ ವಾರ್ಷಿಕೋತ್ಸವ ಆಚರಿಸಿಕೊಂಡ ನಂತರ ಸಿಬ್ಬಂದಿಗೆ 2 ಸಾವಿರ ಡಾಲರ್ (ಸುಮಾರು 1.46 ಲಕ್ಷ ರೂಪಾಯಿ) ಟಿಪ್ಸ್ ನೀಡಿದ್ದಾರೆ. ನಾವು ಇಲ್ಲಿಯೇ ಮೊದಲು ಭೇಟಿಯಾಗಿದ್ದೆವು. ನಂತರ ಇಲ್ಲಿಂದಲೇ ದಾಂಪತ್ಯ ಜೀವನ ಆರಂಭಿಸಿದ್ದೆವು. ದಂಪತಿ ಕೆಲ ವರ್ಷ ಒಟ್ಟಿಗೆ ಬಾಳುವುದೇ ಕಷ್ಟ. ಅಂಥ ಸಂದರ್ಭದಲ್ಲಿ, 20 ವರ್ಷಗಳ ದಾಂಪತ್ಯ ಜೀವನವನ್ನು ನಾವು ನಡೆಸಿದ್ದೇವೆ. ಇಷ್ಟು ಉತ್ತಮ ದಾಂಪತ್ಯಕ್ಕೆ ಈ ಹೋಟೆಲ್ ಕಾರಣ ಎಂದಿದ್ದಾರೆ ದಂಪತಿ.
ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಭರ್ಜರಿ ಟಿಪ್ಸ್ ಕೊಟ್ಟು ಎಲ್ಲರೂ ಹಂಚಿಕೊಳ್ಳುವಂತೆ ಹೇಳಿದ್ದಾರೆ. 20 ವರ್ಷಗಳ ಸುಂದರ ನೆನಪಿಗೆ ಹಾಗೂ ಉತ್ತಮ ಆಹಾರ ಮತ್ತು ಸಾಟಿ ಇಲ್ಲದ ಸೇವೆಗೆ ಧನ್ಯವಾದ ಎಂದು ಬಿಲ್ನಲ್ಲಿ ಬರೆದಿದ್ದಾರೆ.
ಈ ಟಿಪ್ಸ್ ನೋಡಿ ಹೋಟೆಲ್ ಸಿಬ್ಬಂದಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲವಂತೆ. ಇಲ್ಲಿ ಎಷ್ಟೋ ಜೋಡಿಗಳು ಬರುತ್ತವೆ, ಸಂಭ್ರಮಾಚರಣೆ ಮಾಡಿಕೊಳ್ಳುತ್ತಾರೆ. ಆದರೆ ಇಷ್ಟೊಂದು ಟಿಪ್ಸ್ ನೀಡಿಲ್ಲ ಎಂದು ಖುಷಿಯಲ್ಲಿ ತೇಲಿದ್ದಾರೆ ಹೋಟೆಲ್ ಸಿಬ್ಬಂದಿ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಲಾಸ್ನಲ್ಲಿದ್ದ ಹೋಟೆಲ್ ಹಾಗೂ ಸಂಬಳವನ್ನೂ ಸರಿಯಾಗಿ ಪಡೆಯಲು ಕಷ್ಟವಾಗುತ್ತಿದ್ದ ಸಿಬ್ಬಂದಿ ಈ ದುಡ್ಡು ನೋಡಿ ಹಿರಿಹಿರಿ ಹಿಗ್ಗಿದ್ದಾರೆ.