

ಅಥಾಟಾ (ಉತ್ತರಪ್ರದೇಶ):ಕರ್ನಾಟಕ ಮಾತ್ರವಲ್ಲದೇ ಭಾರತದ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಉತ್ತರ ಪ್ರದೇಶದ ಹಲವು ಭಾಗಗಳಲ್ಲಿಯೂ ಪ್ರವಾಹದ ಸ್ಥಿತಿ ಉಂಟಾಗಿದೆ. ಇದೇ ಕಾರಣಕ್ಕೆ ಸಂತ್ರಸ್ತರನ್ನು ಬೋಟ್ಗಳ ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ.
ದುರದೃಷ್ಟವಶಾತ್ ಸ್ಥಳಾಂತರ ಕಾರ್ಯ ಕೈಗೊಂಡಿದ್ದ ದೋಣಿ ಗಂಗಾ ನದಿಯಲ್ಲಿ ಮುಳುಗಿ ಆರು ಜನರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಅಥಾಟಾ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್ ಹೋದ ಕೆಲವೇ ಗಂಟೆಗಳಲ್ಲಿ ಈ ಅನಾಹುತ ಸಂಭವಿಸಿದೆ. ಈ ದೋಣಿಯಲ್ಲಿ 17 ಜನರಿದ್ದರು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 10 ಮಂದಿಯನ್ನು ರಕ್ಷಿಸಲಾಗಿದೆ.
25 ಜನರು ಆರಾಮವಾಗಿ ಕುಳಿತುಕೊಳ್ಳುವ ದೋಣಿ ಇದಾಗಿದೆ. ದೋಣಿಯಲ್ಲಿ 17 ಮಂದಿ ಇದ್ದರೂ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣ, ದೋಣಿಯಲ್ಲಿ ಹಾವು ಕಾಣಿಸಿಕೊಂಡಿರುವುದು. ಇದನ್ನು ಕಂಡು ದೋಣಿಯಲ್ಲಿ ಇದ್ದವರು ಗಾಬರಿಗೊಂಡು ನದಿಗೆ ಹಾರಿಬಿಟ್ಟಿದ್ದಾರೆ. ಈ ಸಮಯದಲ್ಲಿ ಸಮತೋಲನ ತಪ್ಪಿ ದೋಣಿ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.
ಘಟನೆ ನಡೆದ ಬಳಿಕ ಪುನಃ ಯೋಗಿ ಆದಿತ್ಯನಾಥ ಹಾಗೂ ಘಾಜಿಪುರ ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಸ್ಥಳಕ್ಕೆ ಧಾವಿಸಿದರು. ಒಂದು ಹೆಣ್ಣು ಮಗು ಮಾತ್ರ ಇದುವರೆಗೆ ಪತ್ತೆಯಾಗಲಿಲ್ಲ. ಉಳಿದವರ ಮೃತದೇಹ ಸಿಕ್ಕಿವೆ. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)