ದಿಯುವಿನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ: ಎಲ್ಲಾ 13 ಕ್ಷೇತ್ರಗಳಲ್ಲಿಯೂ ಜಯ- ಕಾಂಗ್ರೆಸ್​ ಶೂನ್ಯ!

election1
Published on

ದಿಯು: ಪಶ್ಚಿಮ ಭಾರತದಲ್ಲಿರುವ ದಿಯು ಮತ್ತು ದಮನ್​ಗಳ ಪೈಕಿ ದಿಯು ಮುನ್ಸಿಪಲ್ ಕೌನ್ಸಿಲ್‌ಗೆ ಇದೇ 7ರಂದು ಚುನಾವಣೆ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ಚುನಾವಣೆ ನಡೆದ ಒಟ್ಟೂ 13 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕಗೆ ಹಾಕಿಕೊಂಡಿದೆ. ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಕಾಂಗ್ರೆಸ್​ಗೆ ಸಾಧ್ಯವಾಗದೇ ಭಾರಿ ಮುಖಭಂಗ ಅನುಭವಿಸಿದೆ.

ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಆದರೆ, ಉಳಿದ ಏಳು ಸ್ಥಾನಕ್ಕೆ ಜುಲೈ 7 ರಂದು ಚುನಾವಣೆ ನಡೆದು, ಈಗ ಫಲಿತಾಂಶ ಹೊರಬಿದ್ದಿದೆ. ಒಂದೂವರೆ ದಶಕದ ನಂತರ ಕೌನ್ಸಿಲ್‌ ಅಧಿಕಾರವನ್ನು ಬಿಜೆಪಿ ಪಾಲಾಗಿದೆ. ಇಷ್ಟೇ ಅಲ್ಲದೇ ಎಲ್ಲಾ ಕ್ಷೇತ್ರಗಳನ್ನು ಒಂದೇ ಪಕ್ಷ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.

ಮತದಾರರು ತುಷ್ಟೀಕರಣ ರಾಜಕಾರಣವನ್ನು ತಿರಸ್ಕರಿಸಿ ಅಭಿವೃದ್ಧಿಯ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಿ ಮತ್ತಷ್ಟು ಅಭಿವೃದ್ಧಿಗೊಳಿಸಲು ಸಹಕರಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ಡಿಎನ್‌ಎಚ್ ಮತ್ತು ದಮನ್-ದಿಯು ಬಿಜೆಪಿ ರಾಜ್ಯಾಧ್ಯಕ್ಷ ದೀಪೇಶ್ ತಾಂಡೇಲ್ ಹೇಳಿದ್ದಾರೆ. ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ಅಪಾರ ಪ್ರೀತಿಯಿಂದಲೇ ಇದು ಸಾಧ್ಯವಾಯಿತು ಎಂದು ಬಿಜೆಪಿ ಹೇಳಿದೆ.

ಅರುಣಾಚಲ ಪ್ರದೇಶದ ಪಂಚಾಯಿತಿಗಳಿಗೆ ಇದೇ 12ರಂದು ಉಪಚುನಾವಣೆ ನಡೆಯಲಿದೆ. ಕುತೂಹಲದ ಸಂಗತಿ ಎಂದರೆ 130 ಪಂಚಾಯಿತಿಗಳಲ್ಲಿ ಇದಾಗಲೇ 102 ಅವಿರೋಧವಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನು 28 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net