

ನವದೆಹಲಿ: ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ನಗರಪಾಲಿಕೆ ಕೌನ್ಸಿಲರ್ ಮನೋಜ್ ಮಹಾಲಾವತ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ನ ವಸಂತ್ ಕುಂಜ್ವಾರ್ಡ್ನ ಕೌನ್ಸಲರ್ ಆಗಿದ್ದ ಮನೋಜ್ ಅವರು ಕೆಲಸ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ ಹತ್ತು ಲಕ್ಷ ರೂಪಾಯಿ ಲಂಚದ ಬೇಡಿಕೆಯೊಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಯಾವುದೇ ಅಡೆತಡೆಯಿಲ್ಲದೆ ಮನೆ ಕಟ್ಟಲು ಅವಕಾಶ ಕಲ್ಪಿಸಲು ಮನೆ ಮಾಲೀಕರಿಂದ ಹತ್ತು ಲಕ್ಷ ರೂಪಾಯಿ ಬೇಡಿಕೆ ಒಡ್ಡಿರುವ ಆರೋಪ ಇವರ ಮೇಲಿದೆ.
ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ಪಕ್ಷ ಯಾವುದೇ ರಾಜೀ ಸೂತ್ರ ಅನುಸರಿಸುವುದಿಲ್ಲ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದು ಪ್ರವೀಣ್ ಹೇಳಿದ್ದಾರೆ.
ಮನೋಜ್ ಅವರನ್ನು ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.