

ಕೊಲ್ಲಂ (ಕೇರಳ): ಮುಂಬರುವ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯೊಬ್ಬರು ಪ್ರಚಾರ ನಡೆಸುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
60 ವರ್ಷದ ಎಲಿಪರಂಬತ್ ವಿಶ್ವನಾಥನ್ ಅವರು ಮೃತಪಟ್ಟಿದ್ದು, ಮತಯಾಚನೆಗೆ ಹೋದ ಸಮಯದಲ್ಲಿ ಈ ಘಟನೆ ನಡೆದಿದೆ. ಇವರು ಕೊಲ್ಲಂ ಜಿಲ್ಲೆಯ ಪಂಚನ ಪಂಚಾಯಿತಿಯ ಪರಂಪಿಮುಕ್ಕು ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಪನ್ಮಣದ ಕೊಲ್ಲಿಸೇರಿ ಜಂಕ್ಷನ್ನಲ್ಲಿ ಪ್ರಚಾರಕ್ಕಾಗಿ ಪಕ್ಷದ ಸದಸ್ಯರೊಂದಿಗೆ ತಮ್ಮ ಮನೆಯಿಂದ ಹೊರಬಂದ ನಂತರ ವಿಶ್ವನಾಥನ್ ಕುಸಿದು ಬಿದ್ದಿದ್ದಾರೆ ಎಂದು ಮೂಲಗಳು ಹೇಳಿದೆ. ಕೂಡಲೇ ಅವರನ್ನು ಕರುಣಗಪ್ಪಲ್ಲಿ ತಾಲ್ಲೂಕು ಆಸ್ಪತ್ರೆಗೆ ಮತ್ತು ನಂತರ ಆಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ಸತ್ರೂ ನಾನು ಆ ಪಕ್ಷ ಸೇರಲ್ಲ ಎಂದು ಕೆಂಡಾಮಂಡಲನಾದ ಸಂಸದ…
ವಿಶ್ವನಾಥನ್ ಅವರು ಪತ್ನಿ ಸತಿದೇವಿ, ಮಗಳು ಬಿಜಿ ಮತ್ತು ಪುತ್ರರಾದ ವಿಪಿನ್ ಕುಮಾರ್ ಮತ್ತು ವಿನು ಕುಮಾರ್ ಅವರನ್ನು ಅಗಲಿದ್ದಾರೆ.
ಅದೇ ಇನ್ನೊಂದೆಡೆ, ಕಾಂಗ್ರೆಸ್ನ ಆರ್.ಗಿರಿಜಾ ಕುಮಾರ್ (42) ಅವರೂ ಚುನಾವಣಾ ಪ್ರಚಾರದ ವೇಳೆ ಕೆಲ ದಿನಗಳ ಹಿಂದೆ ಮೃತಪಟ್ಟಿರುವ ವರದಿಯಾಗಿದೆ. ಪ್ರಚಾರದ ವೇಳೆ ಅವರ ಮೇಲೆ ಮರ ಬಿದ್ದು ಮೃತಪಟ್ಟಿದ್ದರು.
ತಿರುವನಂತಪುರಂನ ಕರೋಡೆ ಪಂಚಾಯಿತಿಯ ಪುತಿಯ ಉಚಕ್ಕಡ ವಾರ್ಡ್ನಲ್ಲಿ ಗಿರಿಜಾ ಕುಮಾರ್ ಕಣಕ್ಕಿಳಿದಿದ್ದರು. ಮನೆ-ಮನೆಗೆ ಕ್ಯಾನ್ವಾಸಿಂಗ್ ಮಾಡುವಾಗ, ಪುಲುವೆಟ್ಟಿಯ ಕಿರಿದಾದ ಲೇನ್ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮರವೊಂದು ಅವರ ತಲೆಯ ಮೇಲೆ ಬಿದ್ದಿತ್ತು.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 8, 10 ಮತ್ತು 14 ರಂದು ಮೂರು ಹಂತಗಳಲ್ಲಿ ನಡೆಯಲಿದೆ. ರಾಜ್ಯದ 1,199 ಸ್ಥಳೀಯ ಸಂಸ್ಥೆಗಳಿಗೆ 1.68 ಲಕ್ಷಕ್ಕೂ ಹೆಚ್ಚು ನಾಮಪತ್ರ ಸಲ್ಲಿಸಲಾಗಿದೆ. ರಾಜ್ಯದ 941 ಗ್ರಾಮ ಪಂಚಾಯಿತಿಗಳಿಗೆ ಮಾತ್ರ 1.23 ಲಕ್ಷ ನಾಮಪತ್ರ ಸಲ್ಲಿಸಲಾಗಿದ್ದು, 152 ಬ್ಲಾಕ್ ಪಂಚಾಯಿತಿಗಳಿಗೆ ಸ್ಪರ್ಧಿಸಲು 14,195 ಜನರು ನಾಮಪತ್ರ ಸಲ್ಲಿಸಿದ್ದಾರೆ. ಏತನ್ಮಧ್ಯೆ, ರಾಜ್ಯದ ಆರು ನಿಗಮಗಳಿಗೆ 4,347 ಜನರು ಮತ್ತು 86 ಪುರಸಭೆಗಳಿಗೆ 22,798 ಜನರು ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ.