ಔಷಧಿ ಕಂಡುಹಿಡಿದ ಬಯೋಕಾನ್‌ ವ್ಯವಸ್ಥಾಪಕಿಗೂ ಬಿಡದ ಕರೊನಾ: ಟ್ವೀಟ್‌

biocon-corona
Published on

ನವದೆಹಲಿ: ಪ್ರತಿಷ್ಠಿತ ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ, ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್‌ ಷಾ ಅವರಿಗೆ ಕರೊನಾ ಸೋಂಕು ತಗುಲಿದೆ.

ಕರೊನಾ ರೋಗಿಗಳ ಜೀವ ಉಳಿಸಬಹುದಾದ ಕರೊನಾ ಔಷಧವನ್ನು ಕಂಡುಹಿಡಿದಿದ್ದ ಕಿರಣ್‌ ಅವರಿಗೂ ಕರೊನಾ ಬಿಟ್ಟಿಲ್ಲ.

'ಇಟೋಲಿಝುಮಬ್' ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಬಯೋಕಾನ್ ಸಂಸ್ಥೆ ಅನುಮತಿ ಪಡೆದುಕೊಂಡಿತ್ತು.

ಆದರೆ ಇದೀಗ ಕಿರಣ್‌ ಅವರಿಗೆ ಕರೊನಾ ತಗುಲಿರುವುದರಿಂದ ಎಲ್ಲರಲ್ಲಿ ಆತಂಕ ಮನೆಮಾಡಿದೆ. ತಮಗೆ ಕರೊನಾ ಪಾಸಿಟಿವ್‌ ಬಂದಿರುವ ಕುರಿತು ಸತಃ ಕಿರಣ್‌ ಅವರೇ ಟ್ವೀಟ್‌ ಮಾಡಿದ್ದಾರೆ.

ಕರೊನಾವೈರಸ್‌ ಪರೀಕ್ಷೆ ವರದಿಯು ಪಾಸಿಟೀವ್‌ ಬಂದಿದ್ದು, ಈ ಮೂಲಕ ಕೋವಿಡ್‌ ಸೋಂಕಿನ ಎಣಿಕೆಯಲ್ಲಿ ಈಗ ನಾನು ಕೂಡ ಸೇರಿಕೊಂಡಿದ್ದೇನೆ. ಆದರೆ, ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದು, ಗುಣವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ನಿವಾಸಿ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಗೆ ನೂರಾರು ಮಂದಿ ಟ್ವೀಟ್ ಮಾಡಿದ್ದು, ಬೇಗ ಚೇತರಿಸಿಕೊಳ್ಳಿ ಹಾರೈಸಿದ್ದಾರೆ.

ಇವರು ಕಂಡುಹಿಡಿದಿರುವ ಸ್ವಲ್ಪ ದುಬಾರಿ ಎನಿಸಿರುವ ಕರೊನಾ ಔಷಧಿಯು ಕರೊನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸುತ್ತದೆ.

ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ ಹೋರಾಡುವಂಥ ಇಟೋಲಿಝುಮಬ್, ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ, ಕಿರಣ್‌ ಅವರೂ ಶೀಘ್ರದಲ್ಲಿ ಗುಣಮುಖರಾಗುವ ಭರವಸೆಯನ್ನು ಅವರ ಅಭಿಮಾನಿಗಳು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net