VIDEO: ಮಕ್ಕಳಿಗೆ ಪ್ಯಾಡ್ ಕೊಡಬಹುದೆ ಎಂದ ಬಾಲಕಿಗೆ ಲೇಡಿ ಐಎಎಸ್​ ಅಧಿಕಾರಿಯಿಂದ ಥೂ ಇದೆಂಥ ಕೀಳು ಮಾತು!

IAS
Published on

ಪಟ್ನಾ: ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಸಾಧ್ಯವೇ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಮಹಿಳಾ ಅಧಿಕಾರಿಯೊಬ್ಬರು ಅಸಂಬದ್ಧವಾಗಿ ಮಾತನಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಲೇಡಿ ಐಎಎಸ್​ ಅಧಿಕಾರಿಯ ಅಹಂಕಾರದ, ಕೀಳುಮಟ್ಟದ ಮಾತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿದೆ.

ಸರ್ಕಾರವು 20-30 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದಲ್ಲವೇ ಎಂದು ವಿದ್ಯಾರ್ಥಿನಿಯೊಬ್ಬಳು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರಿಗೆ ಕೇಳಿದಾಗ ಅವರು ಕೊಟ್ಟ ಉತ್ತರಕ್ಕೆ ಇದೀಗ ಇಡೀ ಮಹಿಳಾ ಸಮುದಾಯ ಕಿಡಿಕಾರಿದೆ. ಕೊಳೆಗೇರಿಯಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಹಾಗೂ ಹೆಣ್ಣುಮಕ್ಕಳಿಗೆ ಕಡಿಮೆ ದರದಲ್ಲಿ ಸರ್ಕಾರದಿಂದ ಸ್ಯಾನಿಟರಿ ಪ್ಯಾಡ್ ಒದಗಿಸುವಂತೆ ಮನವಿ ಮಾಡಿದ್ದಳು. ಅದಕ್ಕೆ ಭಮ್ರಾ ಅವರು, 'ನಾಳೆ ಸರ್ಕಾರ ನಿಮಗೆ ಕಾಂಡೋಮ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೀರಾ' ಎಂದು ಅಸಂಬಂಧವಾಗಿ ಪ್ರಶ್ನಿಸಿದ್ದಾರೆ!

ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ ('ಸಶಕ್ತ ಹೆಣ್ಣುಮಕ್ಕಳು, ಸಮೃದ್ಧ ಬಿಹಾರ') ಸಂವಾದದಲ್ಲಿ ಈ ರೀತಿಯ ಅಸಹ್ಯ ಮಾತು ಕೇಳಿಬಂದಿರುವುದು ಅಧಿಕಾರಿಯ ವಿರುದ್ಧ ಮತ್ತಷ್ಟು ಕಿಡಿ ಕಾರುವಂತೆ ಮಾಡಲಾಗಿದೆ. "ಸರ್ಕಾರವು ಜೀನ್ಸ್ ಕೂಡ ಕೊಡಬಹುದು ಎಂದು ನಾಳೆ ನೀವು ಹೇಳುತ್ತೀರಿ. ಬಳಿಕ ಸುಂದರವಾದ ಜೋಡಿ ಶೂಗಳು ಬೇಕು ಎನ್ನುತ್ತೀರಿ, ಅದನ್ನು ಕೊಟ್ಟ ಮೇಲೆ ಕುಟುಂಬ ಯೋಜನಾ ಮಾದರಿಗಳಾದ ಕಾಂಡೋಮ್ ಅನ್ನೂ ಸರ್ಕಾರ ನೀಡಲಿ ಎಂದು ನೀವು ನಿರೀಕ್ಷಿಸುತ್ತೀರಾ" ಎಂದು ಅಧಿಕಾರಿ ಹೇಳಿದ್ದಾರೆ.


ಜನರ ಮತಗಳಿಂದ ಸರ್ಕಾರ ಸೃಷ್ಟಿಯಾಗುತ್ತದೆ ಎಂದು ವಿದ್ಯಾರ್ಥಿನಿ ಅಧಿಕಾರಿಗೆ ನೆನಪಿಸಿದ್ದಾರೆ. ಆಗ ಮತ್ತೆ ಕುಹಕವಾಡಿದ ಅಧಿಕಾರಿ, "ಇದು ಮೂರ್ಖತನದ ಪರಮಾವಧಿ. ಅಷ್ಟಾದರೆ ಮತ ಹಾಕಬೇಡಿ. ಪಾಕಿಸ್ತಾನಿಗಳಾಗಿ. ನೀವು ಹಣ ಮತ್ತು ಸೇವೆಗಳಿಗೆ ಮತ ಹಾಕುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.


ಹಾಗಾದರೆ ಸರ್ಕಾರದ ಯೋಜನೆಗಳು ಏಕೆ ಅಸ್ತಿತ್ವದಲ್ಲಿವೆ ಎಂದು ಸಭಾಂಗಣದಲ್ಲಿದ್ದ ಸದಸ್ಯರೊಬ್ಬರು ಕೇಳಿದ್ದಾರೆ. "ಈ ಆಲೋಚನೆಯಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ" ಎಂದು ಭಮ್ರಾ ಹೇಳಿದ್ದಾರೆ. ಬಳಿಕ ವೇದಿಕೆಯಲ್ಲಿದ್ದ ವಿದ್ಯಾರ್ಥಿನಿಯರತ್ತ ತಿರುಗಿ, "ಭವಿಷ್ಯದಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡಿಕೊಳ್ಳಲು ಬಯಸುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಸರ್ಕಾರ ಇದನ್ನು ನಿಮಗಾಗಿ ಮಾಡಲು ಸಾಧ್ಯವಿಲ್ಲ. ನೀವು ಎಲ್ಲಿ ಕೂತಿದ್ದೀರೋ ಅಲ್ಲಿಯೇ ಕೂರಲು ಬಯಸುತ್ತೀರಾ ಅಥವಾ ನಾನು ಕುಳಿತಿರುವಲ್ಲಿಯೇ?" ಎಂದು ಕೇಳಿದ್ದಾರೆ.

ಇದರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net