ಮಮತಾ v/s ಪ್ರಿಯಾಂಕಾ- ಚುನಾವಣಾ ಕಣದಲ್ಲಿ ವಕೀಲರು: ಭವಾನಿಪುರದ ಇಂಟರೆಸ್ಟಿಂಗ್‌ ತ್ರಿಕೋನ ಸ್ಟೋರಿ...

westbengal
Published on

ಕೋಲ್ಕತಾ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ನಿಂತು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಕೆಲ ಮತಗಳಿಂದ ಪರಾಭವಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ.

ಅಂದು ಚುನಾವಣೆಯಲ್ಲಿ ಸೋತಿದ್ದರೂ ಅವರ ಟಿಎಂಸಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದರಿಂದ ಮುಖ್ಯಮಂತ್ರಿ ಗದ್ದುಗೆ ಏರಿದ್ದರು ಮಮತಾ. ನಿಯಮದ ಪ್ರಕಾರ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳ ಒಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಆಯ್ಕೆಯಾಗಬೇಕೆಂಬ ನಿಯಮವಿದೆ. ಹೀಗಾಗಬೇಕಿದ್ದಲ್ಲಿ ಒಬ್ಬ ಶಾಸಕನ ರಾಜೀನಾಮೆ ಪಡೆದು ಆ ಸ್ಥಾನದಲ್ಲಿ ಇವರು ಸ್ಪರ್ಧಿಸಬೇಕಿತ್ತು.

ಮುಖ್ಯಮಂತ್ರಿಗಾಗಿ ಇದೀಗ ಭವಾನಿಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿಎಂಸಿ ಶಾಸಕ ಸೋಭನ್‌ದೇಬ್ ಚಟ್ಟೋಪಾಧ್ಯಾಯ ರಾಜೀನಾಮೆ ಸಲ್ಲಿಸಿ ಮಮತಾ ಬ್ಯಾನರ್ಜಿಗೆ ಅನುವು ಮಾಡಿಕೊಟ್ಟಿದ್ದಾರೆ.

ಇದೀಗ ಆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಇದಾಗಲೇ ಬಿಜೆಪಿ ದೀದಿ ಎದುರು ತಮ್ಮ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್​ ಹಜ್ರಾ ಅವರನ್ನು ಕಣಕ್ಕಿಳಿಸಿದೆ.

ಆದರೆ ಕುತೂಹಲದ ಸಂಗತಿ ಎಂದರೆ ಮಮತಾ ಬ್ಯಾನರ್ಜಿ ಮತ್ತು ಪ್ರಿಯಾಂಕಾ ಅವರ ನಡುವೆ ಕೆಲವೊಂದು ಸಾಮ್ಯತೆ ಇದ್ದು, ಕೋರ್ಟ್‌ ಕಣದಲ್ಲಿ ಪ್ರಿಯಾಂಕಾ ಮಮತಾ ಅವರನ್ನು ಸೋಲಿಸಿದ್ದರು. ಅಂದರೆ ಇವರಿಬ್ಬರೂ ವಕೀಲಿ ವೃತ್ತಿ ನಡೆಸಿದವರು. ಇನ್ನೂ ಒಂದು ಕುತೂಹಲ ಎಂದರೆ ಭವಾನಿಪುರದಿಂದ ಇವರ ಎದುರು ನಿಂತಿರುವ ಸಿಪಿಐ(ಎಂ) ಅಭ್ಯರ್ಥಿ ಶ್ರೀಜಿಬ್​​ ವಿಶ್ವಾಸ್​ ಕೂಡ ಅಲಿಪುರ ಕೋರ್ಟ್​ನ ವಕೀಲರಾಗಿದ್ದಾರೆ. ಮೂವರು ವಕೀಲರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಜೋಗೇಶ್​ ಚಂದ್ರ ಕಾಲೇಜಿನಲ್ಲಿ 1982ರಲ್ಲಿ ಎಲ್​ಎಲ್​ಬಿ ವ್ಯಾಸಂಗ ಮಾಡಿದ್ದಾರೆ. ನಂತರ ವಕೀಲಿ ವೃತ್ತಿ ಕೂಡ ಕೈಗೊಂಡಿದ್ದರು. ಇವರ ಎಲೆಕ್ಷನ್​ ಏಜೆಂಟ್​ ಆಗಿರುವ ಟಿಎಂಸಿ ನಾಯಕ ಬೈಶ್ಯಾನೋರ್​ ಚಟರ್ಜಿ ಈ ಕುರಿತು ಮಾಹಿತಿ ನೀಡಿದ್ದಾರೆ. ನಾವು ಕಾಂಗ್ರೆಸ್​ನಲ್ಲಿದ್ದ ವೇಳೆ ನಮ್ಮ ನಾಯಕರಾದ ಪಂಕಜ್​ ಬ್ಯಾನರ್ಜಿ ಬಂಧನವಾಗಿತ್ತು. ಆಗ ಕೋರ್ಟ್​ನಲ್ಲಿ ನಿಂತ ಮಮತಾ, ಪಂಕಜ್​ ಬ್ಯಾನರ್ಜಿಗೆ ಜಾಮೀನು ಕೊಡಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಆದರೆ ಅದೇ ವೇಳೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಕೂಡ ಕಾನೂನು ಪದವೀಧರರು. 2021ರ ಚುನಾವಣಾ ಫಲಿತಾಂಶದ ಬಳಿಕ ಚುನಾವಣೋತ್ತರ ಹಿಂಸಾಚಾರಗಳ ಬಗ್ಗೆ ಬಿಜೆಪಿ ಪರ ಕೋರ್ಟ್‌ನಲ್ಲಿ ವಾದಿಸಿದ್ದರು. ಆ ಸಂದರ್ಭದಲ್ಲಿ ಇವರ ವಾದದ ಕುರಿತಾಗಿ ಬಹಳಷ್ಟು ಮೆಚ್ಚುಗೆ ಗಳಿಸಿತ್ತು. ಆ ಸಮಯದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ತೀರ್ಪು ಬಂದಿತ್ತು. ಆದ್ದರಿಂದ ಈ ಕುರಿತು ಮಾತನಾಡಿರುವ ಪ್ರಿಯಾಂಕಾ, ನಾನು ಕೋರ್ಟ್​ನಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದೇನೆ. ಎರಡನೇ ಬಾರಿ ನಾನು ಅವರನ್ನು ಚುನಾವಣಾ ಅಖಾಡದಲ್ಲಿ ಸೋಲಿಸುತ್ತೇನೆ ಎಂದು ಹೇಳಿದ್ದಾರೆ.

ಅದೇ ಇನ್ನೊಂದೆಡೆ ಸಿಪಿಐ(ಎಂ) ಅಭ್ಯರ್ಥಿ ಶ್ರೀಜಿಬ್​ ವಕೀಲರಾಗಿದ್ದು, 2014ರಿಂದ ಅವರು ವಕೀಲಿ ವೃತ್ತಿ ನಡೆಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕುರಿತು ಮಾತನಾಡಿರುವ ಅವರು, ಇದು ಕಾಕತಾಳೀಯ ವಿಚಾರ. ನಾನು ಮಮತಾ ಅವರನ್ನು ವಕೀಲೆ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ರಾಜಕಾರಣಿ ಮಾತ್ರ. ಪ್ರಿಯಾಂಕಾ ಹಿರಿಯ ವಕೀಲೆ. ಆದರೆ ಕಾನೂನು ಯುದ್ಧಕ್ಕೂ ರಾಜಕೀಯ ಯುದ್ಧಕ್ಕೂ ತುಂಬಾನೇ ವ್ಯತ್ಯಾಸವಿದೆ ಎಂದಿದ್ದಾರೆ. ಇದೇ 30ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net