ಸಾಲು ಸಾಲು ಕಳ್ಳತನ, ಸುಲಿಗೆ ಮಾಡಿದ್ರೂ ಸುಲಭದಲ್ಲಿ ಎಸ್ಕೇಪ್​ ಆಗ್ತಿದ್ದ ಖದೀಮ, ಪತ್ನಿ ಜತೆ ಜಗಳವಾಡಿ ಸಿಕ್ಕಿಬಿದ್ದ!

theif
Published on

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಈತ ಮಾಡಿರುವ ಅಪರಾಧಿಯ ಕೃತ್ಯಗಳಿಗೆ ಲೆಕ್ಕವೇ ಇಲ್ಲ. ಮನೆಗಳ್ಳತನ, ಸರಗಳ್ಳತನ, ಸುಲಿಗೆ ಸೇರಿದಂತೆ 30ಕ್ಕೂ ಅಧಿಕ ಅಪರಾಧಿಕ ಕೃತ್ಯಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವ. ಆದರೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸೋದ್ರಲ್ಲಿ ಈತ ಎಕ್ಸ್​ಪರ್ಟ್​.

ಇಂಥದ್ದೊಂದು ಖತರ್ನಾಕ ಕಳ್ಳನ ಹೆಸರು ಆಸೀಫ್. ಪೊಲೀಸರಿಗೆ ತಲೆನೋವಾಗಿದ್ದ ಈತನಿಗೆ ಪತ್ನಿಯ ಜತೆ ಜಗಳವಾಡಿದ್ದೇ ದೊಡ್ಡ ಮುಳುವಾಗಿ ಹೋಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆಸೀಫ್​, ಪತ್ನಿಯ ಜತೆ ಜಗಳವಾಡಿರುವ ಕಾರಣದಿಂದ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆಗಿದ್ದೇನೆಂದರೆ, ಆಸೀಫ್​ ತನ್ನ ಪತ್ನಿ ಜತೆ ಜಗಳವಾಡಿಕೊಂಡು ಮನೆಯಿಂದ ದೂರವಾಗಿದ್ದ. ಈತನಿಗೊಬ್ಬ ಮಗಳಿದ್ದು, ಆಕೆ ಶಾಲೆಯಲ್ಲಿ ಓದುತ್ತಿದ್ದಾಳೆ. ಮಗಳನ್ನು ಪತ್ನಿ ತೋರಿಸುತ್ತಿರಲಿಲ್ಲ. ಈ ಕಾರಣದಿಂದ ಈತ ಮಗಳನ್ನು ನೋಡಲು ಆಕೆ ಓದುತ್ತಿರುವ ಶಾಲೆಗೆ ಹೋಗುತ್ತಿದ್ದ. ಅಲ್ಲಿ ಮಗಳನ್ನು ಗುಟ್ಟಾಗಿ ಭೇಟಿಯಾಗಿ ಬರುತ್ತಿದ್ದ.

ಈ ವಿಷಯ ಪೊಲೀಸರಿಗೆ ತಿಳಿದಿದೆ. ಆತ ಬರುವುದನ್ನೇ ಕಾದು ಮಗಳ ಶಾಲಾ ವಾಹನದಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಬಂಧಿತ ಆರೋಪಿಯಿಂದ ಪೊಲೀಸರು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net