

ಚೆನ್ನೈ: ಅಡುಗೆ ಎಣ್ಣೆಯಲ್ಲಿ ಭಾರಿ ಕಲಬೆರಕೆ ಆಗುತ್ತಿರುವ ಬಗ್ಗೆ ತುಂಬಾ ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ಇನ್ನು ಮುಂದೆ ತಮಿಳುನಾಡಿನಲ್ಲಿ ಅಡುಗೆ ಎಣ್ಣೆಯನ್ನು ಲೂಸ್ ಪ್ಯಾಕೆಟ್ಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ತಿನ್ನಲು ಬಳಸುತ್ತಿರುವ ಈ ತೈಲದಲ್ಲಿ ಅಪಾರ ಪ್ರಮಾಣ ಕಲಬೆರಕೆ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕಿರುಬಂಕರನ್ ನೇತೃತ್ವದ ಪೀಠ, ಈ ಮಧ್ಯಂತರ ಆದೇಶ ಹೊರಡಿಸಿದೆ. ಕೋರ್ಟ್ನ ಮುಂದಿನ ತೀರ್ಪಿನವರೆಗೆ ಲೂಸ್ ಪ್ಯಾಕೇಟ್ಗಳಲ್ಲಿ ತೈಲ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ.
ಈ ರೀತಿ ಅಡುಗೆ ಎಣ್ಣೆಯಲ್ಲಿ ಕಲಬೆರಿಕೆ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಹಾಗೂ ಇದು ಅತ್ಯಂತ ಕಳವಳಕಾರಿ ವಿಷಯ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಆದ್ದರಿಂದ ಇಂಥ ಕಲಬೆರಕೆ ಮಾಡುತ್ತಿರುವವರ ವಿರುದ್ಧ ತಮಿಳುನಾಡು ಗೂಂಡಾಕಾಯ್ದೆ-1982ರ ಅಡಿ ಶಿಕ್ಷೆ ನೀಡುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಅಯ ಪಟ್ಟಿದ್ದಾರೆ.
ಕಲಬೆರಕೆ ಮಾಡುವವರು, ಅದನ್ನು ತಯಾರಿಸುವವರು, ವಿತರಕರು ಹಾಗೂ ಮಾರಾಟಗಾರರು ಎಲ್ಲರನ್ನೂ ತಪ್ಪಿತಸ್ಥರನ್ನಾಗಿ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಈ ರೀತಿ ಕಲಬೆರಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಮಾತ್ರವಲ್ಲದೇ, ಮನುಷ್ಯನ ಇಡೀ ನರವ್ಯೂಹವನ್ನೇ ಅಪಾಯದ ಅಂಚಿನಲ್ಲಿ ತರುತ್ತದೆ. ಮಾತ್ರವಲ್ಲದೇ, ದೃಷ್ಟಿದೋಷ, ವಾಕರಿಕೆ, ವಾಂತಿ, ತಲೆತಿರುಗುವಿಕೆ, ತಲೆನೋವು ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನೂ ಇದು ತರಬಲ್ಲುದು. ಇವೆಲ್ಲಾ ಗೊತ್ತಿದ್ದರೂ ಈ ರೀತಿ ಕಲಬೆರಕೆ ಮಾಡಿ ಜನರ ಜೀವದ ಜತೆ ಚೆಲ್ಲಾಟವಾಡುವುದು ನಾವು ಸಹಿಸಲ್ಲ ಎಂದು ಕೋರ್ಟ್ ಹೇಳಿದೆ.
ತಮಿಳುನಾಡಿನಲ್ಲಿ ಎಣ್ಣೆ ತಯಾರಿಕೆ ಘಟಕಗಳು ಎಷ್ಟಿವೆ, ಯಾವ್ಯಾವ ಪ್ರಯೋಗಾಲಯಗಳಲ್ಲಿ ಇದರ ಗುಣಮಟ್ಟದ ಪರೀಕ್ಷೆ ನಡೆಯುತ್ತದೆ, ಅದರ ಉಸ್ತುವಾರಿ ವಹಿಸಿರುವವರು ಯಾರು ಇತ್ಯಾದಿಗಳ ಬಗ್ಗೆ ಸರ್ಕಾರದಿಂದ ನ್ಯಾಯಮೂರ್ತಿಗಳು ಮಾಹಿತಿ ಬಯಸಿದ್ದಾರೆ.