ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

ramdev
Published on

ನವದೆಹಲಿ: ಕೋವಿಡ್‌ಗೆ ಪರಿಣಾಮಕಾರಿಯೆಂದು ಹೇಳುವ ಮೂಲಕ ಬಿಡುಗಡೆಯಾಗುತ್ತಿರುವ ಔಷಧಗಳನ್ನು ಸೋಂಕಿತರ ಮೇಲೆ ಪ್ರಯೋಗಿಸಿದ ನಂತರ, ಅವು ಅಷ್ಟು ಪರಿಣಾಮ ಬೀರುತ್ತಿಲ್ಲ ಎಂಬುದಾಗಿ ಹೊರಬರುತ್ತಿರುವ ಅಧ್ಯಯನ ವರದಿಗಳಿಗೆ ಕಿಡಿಕಾರಿದ್ದ ಬಾಬಾ ರಾಮ್‌ದೇವ್‌, ಅಲೋಪಥಿಯ ವಿರುದ್ಧ ಕಿರಿಕಾರಿದ್ದರು. ‘ಅಲೋಪಥಿ ಮೂರ್ಖರ ವಿಜ್ಞಾನ’ ಎಂದು ಭಾಷಣ ಮಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಇದರಿಂದ ಇಡೀ ವೈದ್ಯಕೀಯ ಲೋಕವೇ ಬಾಬಾ ರಾಮ್‌ದೇವ್‌ ವಿರುದ್ಧ ತಿರುಗಿಬಿದ್ದಿದ್ದು, ಅವರ ವಿರುದ್ಧ ಕೇಸ್‌ ಕೂಡ ದಾಖಲು ಮಾಡಿದ್ದಾರೆ. ಕೆಲವರ ಒತ್ತಡಕ್ಕೆ ಮಣಿದು ರಾಮ್‌ದೇವ್‌ ಅವರು ಕ್ಷಮೆ ಕೋರಿದ್ದರೂ, ಲಿಖಿತವಾಗಿ ಕ್ಷಮೆ ಕೋರುವಂತೆ ವೈದ್ಯರು ಪಟ್ಟುಹಿಡಿದಿದ್ದಾರೆ. ಇವರ ವಿರುದ್ಧ ಒಂದು ಸಾವಿರ ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿ ಬೆದರಿಕೆ ಹಾಕಿದ್ದು, ಲಿಖಿತ ಕ್ಷಮೆ ಕೋರುವಂತೆ ಹೇಳಿದ್ದಾರೆ.

ಅದೇ ಇನ್ನೊಂದೆಡೆ ಬಾಬಾ ರಾಮ್‌ದೇವ್‌ ವಿರೋಧಿಗಳು ಅರೆಸ್ಟ್‌ ರಾಮ್‌ದೇವ್‌ ಹ್ಯಾಷ್‌ಟ್ಯಾಗ್‌ ಚಳವಳಿ ಶುರು ಮಾಡಿದ್ದಾರೆ. ಇದಕ್ಕೆ ಮತ್ತೆ ಸಿಡಿದೆದ್ದಿರುವ ಬಾಬಾ ರಾಮ್‌ದೇವ್‌, 'ಖೈರ್, ಬಂಧನ್ ತೋ ಉನ್‌ಕಾ ಬಾಪ್ ಭೀ ನಹಿ ಕರ್ ಸಕ್ತಾ ಸ್ವಾಮಿ ರಾಮದೇವ್ ಕೋ (ಅವರ ತಂದೆ ಕೂಡ ಸ್ವಾಮಿ ರಾಮದೇವ್ ಅವರನ್ನು ಬಂಧಿಸಲು ಸಾಧ್ಯವಿಲ್ಲ) ಎಂದಿದ್ದಾರೆ. ಅವರು 'ಥಗ್‌ರಾಮದೇವ್‌' (ಕೊಲೆಗೆಡುಕ ರಾಮದೇವ್‌), ಗಿರಫ್ತಾರ್ ರಾಮದೇವ್ (ರಾಮದೇವ್‌ ಅವರನ್ನು ಬಂಧಿಸಿ) ಟ್ರೆಂಡ್ ಸೃಷ್ಟಿಸುತ್ತಲೇ ಇರುತ್ತಾರೆ. ಯಾರು ಏನೇ ಮಾಡಲಿ, ನನಗೇನೂ ಬೇಸರವಿಲ್ಲ. ನಮ್ಮ ಜನರು ಅಂತಹ ಪ್ರವೃತ್ತಿಗಳಿಗೆ ಒಗ್ಗಿಕೊಂಡಿದ್ದಾರೆ ಮತ್ತು ನಮ್ಮ ಪ್ರವೃತ್ತಿಗಳು ಯಾವಾಗಲೂ ಉನ್ನತ ಮಟ್ಟವನ್ನು ತಲುಪುತ್ತವೆ ಎಂದಿದ್ದಾರೆ.

ಇದರಿಂದಾಗಿ ಅಲೋಪಥಿ ವೈದ್ಯರು ಮತ್ತು ಬಾಬಾ ರಾಮ್‌ದೇವ್‌ ಅವರ ನಡುವಿನ ವಿವಾದ ಮತ್ತಷ್ಟು ಉಲ್ಭಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net