ಅಯೋಧ್ಯೆಯಲ್ಲಿ ಸಿಎಂ ಯೋಗಿಗೊಂದು ದೇಗುಲ: ಪ್ರತಿಜ್ಞೆ ಹೀಗೆ ಈಡೇರಿಸಿಕೊಂಡ ಭಕ್ತ...

yogi
Published on

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿರುವ ನಡುವೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ದೇಗುಲವು ಅಯೋಧ್ಯೆಯಲ್ಲಿ ರಾಮಮಂದಿರಕ್ಕಿಂತಲೂ ಮೊದಲು ನಿರ್ಮಾಣಗೊಂಡಿದೆ!

ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಯೋಗಿ ಆದಿತ್ಯನಾಥರನ್ನು ಭಗವಾನ್ ರಾಮನ ಅವತಾರದಂತೆ ಬಿಂಬಿಸಿ ಅವರ ಅಭಿಮಾನಿಯೊಬ್ಬರು ದೇಗುಲ ಕಟ್ಟಿಸಿದ್ದಾರೆ. ಅಯೋಧ್ಯೆಯ ನಿವಾಸಿ ಪ್ರಭಾಕರ ಮೌರ್ಯ ಅವರು ಸುಮಾರು 8.5 ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದಾರೆ. ವಿಗ್ರಹವನ್ನು ರಾಜಸ್ಥಾನದಿಂದ ಆರ್ಡರ್ ಮಾಡಲಾಗಿದೆ.

ಯೋಗಿ ಪ್ರತಿಮೆಯು ಬಿಲ್ಲು ಮತ್ತು ಬಾಣವನ್ನು ಹೊಂದಿದ್ದು, ಅವರನ್ನು ರಾಮನ ಅವತಾರ ಎಂದು ಬಿಂಬಿಸಲಾಗಿದೆ. ಯೋಗಿ ಅಭಿಮಾನಿಗಳು ದಿನವೂ ಇಲ್ಲಿ ಎರಡು ಬಾರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಗುತ್ತದೆ.

ಅಂದಹಾಗೆ, ಭರತಕುಂಡ್, ಭಗವಾನ್ ರಾಮನ ಸಹೋದರ ಭರತ ವನವಾಸಕ್ಕೆ ಹೋಗುವ ಮೊದಲು ಅವನನ್ನು ಬೀಳ್ಕೊಟ್ಟ ಸ್ಥಳವೆಂದು ಹೇಳಲಾಗುತ್ತಿದೆ. ಅಯೋಧ್ಯೆಯಲ್ಲಿ ಯಾರು ರಾಮಮಂದಿರವನ್ನು ಕಟ್ಟುತ್ತಾರೋ ಅವರ ಮಂದಿರವನ್ನು ಕಟ್ಟುತ್ತೇನೆ ಎಂದು ಪ್ರಭಾಕರ ಮೌರ್ಯ ಪ್ರತಿಜ್ಞೆ ಮಾಡಿದ್ದರಂತೆ. 'ಯೋಗಿ ಆದಿತ್ಯನಾಥ ಅವರು ರಾಮ ಮಂದಿರವನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಮಂದಿರವನ್ನು ನಾನು ನಿರ್ಮಿಸಿದ್ದೇನೆ' ಎಂದು ಮೌರ್ಯ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net