

ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷ ಆಗುತ್ತಿದೆ. 2016ರಲ್ಲಿ ಇವರು ಮೃತಪಟ್ಟರೂ, ಕರ್ನಾಟಕದ ಖಜಾನೆಯಲ್ಲಿ ಇವರ ಸೀರೆಗಳು, ಚಪ್ಪಲಿಗಳು ಕೊಳೆಯುತ್ತಿದ್ದು, ಅವುಗಳನ್ನು ಸಾರ್ವಜನಿಕ ಹರಾಜು ಹಾಕುವಂತೆ ಕೋರಿ ಬೆಂಗಳೂರಿನ ವಕೀಲ ಟಿ. ನರಸಿಂಹಮೂರ್ತಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಕಳೆದ 26 ವರ್ಷದಿಂದ ಬೆಂಗಳೂರಿನ ಖಜಾನೆಯಲ್ಲಿ ಬಿದ್ದಿರುವ ಜಯಲಲಿತಾ ಅವರ 11,344 ಸೀರೆಗಳು, 750 ಜತೆ ಚಪ್ಪಲಿ, 250 ಶಾಲುಗಳನ್ನು ಹರಾಜು ಮಾಡುವಂತೆ ವಕೀಲ ನರಸಿಂಹಮೂರ್ತಿ ಕೋರಿದ್ದಾರೆ. ಹರಾಜಿಗೆ ಇಟ್ಟರೆ ಅವರ ಅಭಿಮಾನಿಗಳು ಒಂದು ಸಾವಿರ ಅಥವಾ ಹತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಇಲ್ಲದಿದ್ದರೆ ಎಲ್ಲವೂ ನಿಷ್ಪ್ರಯೋಜಕ ಎಂದು ವಕೀಲರು ಪತ್ರದಲ್ಲಿ ಹೇಳಿದ್ದಾರೆ.
ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಜಯಲಲಿತಾ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿಯನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದ ಚಿನ್ನ, ಬೆಳ್ಳಿ ಬಟ್ಟೆ ಚಪ್ಪಲಿ ಎಲ್ಲವೂ ಕರ್ನಾಟಕದ ವಿಧಾನಸೌಧ ಬಳಿ ಇರುವ ಖಜಾನೆಯಲ್ಲಿವೆ. ಜಯಲಲಿತಾ ಬಳಿ ವಶಪಡಿಸಿಕೊಂಡ ಸೀರೆಗಳನ್ನು ಒಂದು ದಿನಕ್ಕೆ ಒಂದು ಉಟ್ಟುಕೊಂಡರೂ ಸುಮಾರು 38 ವರ್ಷ ಆಗುತ್ತಿತ್ತು. ದಿನಕ್ಕೊಂದು ಚಪ್ಪಲಿ ಧರಿಸಿದರೆ ಒಂದು ಸುತ್ತು ಮುಗಿಯಲು ಎರಡು ವರ್ಷ ಕಾಯಬೇಕಿತ್ತು ಎಂದು ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು.
ಸಿಬಿಐ 1997ರಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಆಕ್ರಮ ಆಸ್ತಿಯನ್ನು ಜಪ್ತಿ ಮಾಡಲಾಯಿತು. ರಾಷ್ಟ್ರೀಯ ಸಂಪತ್ತು ಅಂತಾ ಘೋಷಣೆ ಮಾಡಿ ಕರ್ನಾಟಕದ ಖಜಾನೆಯಲ್ಲಿ ಇಡಲಾಯಿತು. 26 ವರ್ಷಗಳಿಂದ ಅವರ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಾ ಇದ್ದು ನಿಷ್ಪ್ರಯೋಜಕ ಆಗುವುದು ಬೇಡ ಹರಾಜಿಗೆ ಇಟ್ಟರೆ ಅಭಿಮಾನಿಗಳು ತೆಗೆದುಕೊಳ್ಳುತ್ತಾರೆ ಎಂದು ವಕೀಲ ನರಸಿಂಹ ಮೂರ್ತಿ ಹೇಳಿದ್ದಾರೆ. ಈ ಪತ್ರದ ಆಧಾರದ ಮೇಲೆ ನ್ಯಾಯಮೂರ್ತಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.