

ಬಿಹಾರ: ಪತ್ರಕರ್ತರು ಕೆಲವೊಂದು ಘಟನೆಗಳ ವರದಿ ಮಾಡಲು ಹೋದ ಸಂದರ್ಭದಲ್ಲಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡುವುದು ಹೊಸ ವಿಷಯವಲ್ಲ.
ಇದಾಗಲೇ ಹಲವಾರು ಇಂಥ ಘಟನೆಗಳು ನಡೆದಿವೆ. ಅದರಲ್ಲಿಯೂ ಪ್ರತಿಭಟನೆ, ದಾಂಧಲೆ ಇಂಥ ಸಂದರ್ಭಗಳಲ್ಲಿ ಸುದ್ದಿಯನ್ನು ಕವರ್ ಮಾಡಲು ಹೋಗುವ ಮಾಧ್ಯಮದವರ ಮೇಲೆ ಇದಾಗಲೇ ಹಲವಾರು ಬಾರಿ ದಾಳಿ ನಡೆದಿವೆ, ಹಲ್ಲೆಯಾಗಿವೆ, ಕ್ಯಾಮೆರಾಗಳನ್ನು ಪುಡಿಪುಡಿ ಮಾಡಿರುವ ಘಟನೆಗಳೂ ನಡೆದಿವೆ.
ಆದರೆ ಬಿಹಾರದಲ್ಲಿ ನಡೆದಿರುವ ಈ ಘಟನೆ ಆಘಾತವನ್ನುಂಟುಮಾಡಿದೆ. ಅದೇನೆಂದರೆ ಇಂಗ್ಲಿಷ್ ಚಾನೆಲ್ ಒಂದರ ಕ್ಯಾಮೆರಾಮನ್ ಬಿಹಾರದ ಸ್ಥಳೀಯ ಚಾನೆಲ್ 'ಫಸ್ಟ್ ಬಿಹಾರ್ ಚಾನೆಲ್' ಪತ್ರಕರ್ತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಭಾರಿ ನೋವು, ಆಘಾತ, ದುಃಖದಿಂದ ಟ್ವಿಟರ್ನಲ್ಲಿ ಈ ಮಾಹಿತಿಯನ್ನು ವಿನೋದ್ ಕಪ್ರಿ ಎನ್ನುವ ಪತ್ರಕರ್ತ ತೋಡಿಕೊಂಡಿದ್ದಾರೆ. ಜೋರಾಗಿ ಕಣ್ಣೀರು ಹಾಕಿರುವ ಈ ಪತ್ರಕರ್ತ ತನಗಾಗಿರುವ ಅನ್ಯಾಯವನ್ನು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ತಾವು ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ಕ್ಯಾಮೆರಾಮನ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ನನಗೆ ಒದ್ದಿದ್ದಾನೆ, ತಲೆಯ ಮೇಲೆ, ಹೊಟ್ಟೆಯ ಮೇಲೆ, ಮುಖದ ಮೇಲೆ ಒದ್ದಿದ್ದಾನೆ ಎಂದು ದುಃಖ ತೋಡಿಕೊಂಡಿದ್ದಾರೆ.
ಕೆಲವು ನ್ಯೂಸ್ ಚಾನೆಲ್ಗಳು ಪತ್ರಕರ್ತರನ್ನು ಬಿಟ್ಟು ಗೂಂಡಾಗಳನ್ನು ನೇಮಕ ಮಾಡಿಕೊಳ್ಳುತ್ತಿವೆಯೇ ಎಂದು ಪ್ರಶ್ನಿಸಿರುವ ಇವರು, ಇಂಥ ಪರಿಸ್ಥಿತಿಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ಇಂಥ ಗೂಂಡಾಗಳ ನಡುವೆ ನನಗೆ ಕೆಲಸ ನನ್ನ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.