

ಆಸ್ಟ್ರೇಲಿಯಾ: ಚಿತ್ರದಲ್ಲಿರುವ ಪ್ರಾಣಿಯನ್ನು ನೋಡಿದರೆ ಇದು ಭಯಾನಕವಾಗಿ ಗೋಚರಿಸುತ್ತದೆ. ನಿಜವಾದ ಪ್ರಾಣಿಯೋ ಅಥವಾ ರಬ್ಬರ್ನಿಂದ ಮಾಡಿರುವ ಆಟಿಕೆಯ ಪ್ರಾಣಿಯೋ ಎಂದು ಗುರುತಿಸುವುದು ಕಷ್ಟವೇ.
ಈ ಪ್ರಾಣಿಗೆ ಕಣ್ಣುಗುಡ್ಡೆಗಳಿಲ್ಲ, ಹುಬ್ಬಿಲ್ಲದ, ಕೂದಲೂ ಇಲ್ಲ. ಈ ಪ್ರಾಣಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ದರೆ ಇದ್ಯಾವುದು ಎಂದು ಊಹಿಸಬಲ್ಲಿರಾ?
ಅಷ್ಟಕ್ಕೂ ಇದು ದಿನನಿತ್ಯವೂ ನೀವು ನೋಡುತ್ತಿರುವ ಪ್ರಾಣಿಯೇ. ಚಿತ್ರದಲ್ಲಿ ಕಾಣಿಸುತ್ತಿರುವ ಈ ಪ್ರಾಣಿ ಬೆಕ್ಕು!
ಹೌದು. ನಿಜಕ್ಕೂ ಇದು ಬೆಕ್ಕೇ. ಆದರೆ ಅದ್ಯಾವುದೋ ಒಂದು ಸೋಂಕು ತಗುಲಿದ್ದು, ಬೆಕ್ಕಿಗೆ ಈ ಗತಿ ಬಂದಿದೆ. ಇದರ ಹೆಸರು ಜಾಸ್ಪರ್. ಕಳೆದ ವರ್ಷ ಈ ಬೆಕ್ಕಿನ ಬಲಗಣ್ಣಿನಲ್ಲಿ ಫೆಲೈನ್ ಹರ್ಪಿಸ್ ವೈರಸ್ (ಎಫ್‌ಹೆಚ್‌ವಿ) ಮತ್ತು ಕಾರ್ನಿಯಲ್ ಅಲ್ಸರ್ ಸೋಂಕು ತಗುಲಿತ್ತು. ಬರಬರುತ್ತಾ ಇದು ಹೆಚ್ಚಾಗುತ್ತಾ ಹೋಯಿತು.
ಇದರಿಂದ ಕಣ್ಣಿನ ದೃಷ್ಟಿ ಹಾಳಾಯಿತು. ಸೋಂಕು ಹರಡುತ್ತಲೇ ಸಾಗಿದ್ದರಿಂದ ಅದರ ಮಾಲೀಕರು ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದರು. ಆದರೆ ಬರಬರುತ್ತಾ ಇನ್ನೊಂದು ಕಣ್ಣಿಗೂ ಸೋಂಕು ತಗುಲಿ ಅದನ್ನೂ ತೆಗೆಯಬೇಕಾಯಿತು.
ಇದೇ ಸೋಂಕಿನಿಂದ ಬೆಕ್ಕು ತನ್ನ ಇಡೀ ಶರೀರದ ಕೂದಲನ್ನು ಕಳೆದುಕೊಳ್ಳುವಂತಾಗಿದೆ. ಇಷ್ಟಾದರು ಕೂಡ ಬೆಕ್ಕು ತನ್ನ ಮಾಲೀಕ ವೆಟ್ಸ್ನನ್ನು ಸುಲಭದಲ್ಲಿ ಗುರುತಿಸುತ್ತಿದೆ. ತುಂಬಾ ಪ್ರೀತಿ ಮಾಡುತ್ತಿದೆ. ವೆಟ್ಸ್ಗೆ ಕೂಡ ಈ ಬೆಕ್ಕಿನ ಮೇಲೆ ಅಪಾರ ಪ್ರೀತಿ.
ಇಷ್ಟೆಲ್ಲಾ ಸಮಸ್ಯೆಯಿದ್ದರೂ ಬೆಕ್ಕನ್ನು ಅತಿ ಕಾಳಜಿಯಿಂದ ವೆಟ್ಸ್ ಸಾಕುತ್ತಿದ್ದಾರೆ. ತನ್ನ ಬೆಕ್ಕು ತನಗೆ ಸ್ಫೂರ್ತಿ ಎಂದಿರುವ ಈತ, ಬೆಕ್ಕಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಪಾರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇದು ಆಸ್ಟ್ರೇಲಿಯಾದ ಬೆಕ್ಕು.