VIDEO: ದಮ್ಮಯ್ಯ ಅಂತೀನಿ, ನನಗೇ ಓಟ್​ ಹಾಕಿ: ವಿದ್ಯಾರ್ಥಿನಿಯರಿಗೆ ಅಡ್ಡಗಟ್ಟಿ ಕಾಲಿಗೆ ಬಿದ್ದ ಮುಖಂಡರು- ವಿಡಿಯೋ ವೈರಲ್​

election
Published on

ಬರಾನ್​ (ರಾಜಸ್ಥಾನ): ದಯವಿಟ್ಟು ನನಗೇ ಮತ ಹಾಕಿ, ನಿಮ್ಮ ಬಂಧು ನಾನು, ನಿಮ್ಮ ಸೇವಕ ನಾನು, ನಿಮ್ಮನ್ನು ಉದ್ಧಾರ ಮಾಡುವೆ, ನಿಮ್ಮ ಏರಿಯಾಕ್ಕೆ ಸಕಲ ಸೌಲಭ್ಯ ಒದಗಿಸುವೆ.... ಈ ಮಾತುಗಳು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಳುವುದು ಮಾಮೂಲು. ಮತ ಯಾಚನೆ ಮಾಡಲು ಬಂದ ರಾಜಕಾರಣಿಗಳು ನಾಚಿಕೆಯನ್ನೂ ಬಿಟ್ಟು ಪರಿಪರಿಯಾಗಿ ಮತಕ್ಕಾಗಿ ಅಂಗಲಾಚುವುದು, ಕೊನೆಗೆ ಗೆದ್ದ ಮೇಲೆ ಹಲವು ಮುಖಂಡರು ಅತ್ತ ಸುಳಿಯದೇ ಇರುವುದು ಹೊಸ ವಿಷಯವೇನಲ್ಲ.

ಆದರೆ ಇಲ್ಲಿ ಹೇಳುತ್ತಿರುವುದು ಸಾರ್ವತ್ರಿಕ ಚುನಾವಣೆಯ ವಿಷಯವಲ್ಲ. ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬೀಳುತ್ತಿರುವ ಯುವಕರನ್ನು ಒಮ್ಮೆ ಈ ಕೆಳಗಿರುವ ವಿಡಿಯೋದಲ್ಲಿ ನೋಡಿ. ಛೇ ಹೀಗೆಲ್ಲಾ ಮಾಡಬೇಡಿ ಎಂದು ಯುವತಿಯರು ನಾಚಿ ನೀರಾದರೂ ಬಿಡದ ಯುವಕರು ಅವರ ಕಾಲಿಗೆ ಬಿದ್ದು ನಮಗೇ ವೋಟು ಕೊಡಿ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಅಂದ ಹಾಗೆ, ಈ ವಿಡಿಯೋ ರಾಜಸ್ಥಾನದ ಬರಾನ್​ದು. ಹೀಗೆ ಕಾಲೇಜಿನ ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬಿದ್ದು ಅಂಗಲಾಚುತ್ತಿರುವವರು ವಿದ್ಯಾರ್ಥಿ ಸಂಘದ ಯುವಕರು! ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಈ ರೀತಿಯ ಪರಿಪರಿ ವೇಷ! ಸಂಘದ ಮುಖಂಡರು ವಿದ್ಯಾರ್ಥಿಗಳ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದಾಗಿದೆ.

ಅಂದಹಾಗೆ ಸಂಘದ ಚುನಾವಣೆ ನಿನ್ನೆ (ಶುಕ್ರವಾರ) ನಡೆದಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿತ್ತು. ಇಂದು (ಶನಿವಾರ) ಮತ ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಮತ ಚಲಾಯಿಸಲು ಯುವಕರು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್​ ಆಗಿದೆ (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net