ಬೇರೆ ಕೇಸ್‌ನಲ್ಲಿ ಬೇಕಾದವ ಆರ್ಯನ್‌ ಜತೆ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದ! ಮರಾಠಿಗನಿಗೆ ಹೆಲ್ಪ್‌ ಮಾಡಿ ಎಂದು ಗೋಗರೆದ...

gosavi
Published on

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಕೇಳಿಬರುತ್ತಿರುವ ಕೆಲವು ಆರೋಪಿಗಳ ಹೆಸರುಗಳ ಪೈಕಿ ಕಿರಣ್‌ ಗೋಸಾವಿ ಕೂಡ ಒಬ್ಬ. ಆರ್ಯನ್‌ ಖಾನ್‌ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಗೋಸಾವಿಯನ್ನು ಅರೆಸ್ಟ್‌ ಮಾಡಲು ಪೊಲೀಸರು ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದವರೇ ಹೆಚ್ಚು.

ಆದರೆ ಗೋಸಾವಿ ಎಸ್ಕೇಪ್‌ ಆಗಿ ಪೊಲೀಸರ ಗುಮಾನಿಯನ್ನು ಇನ್ನಷ್ಟು ಹೆಚ್ಚುಮಾಡಿದ್ದ. ನಂತರ ಈತನ ‘ಜಾತಕ’ ಕೆದಕಿದಾಗ ಹಲವಾರು ಕ್ರಿಮಿನಲ್‌ ಕೇಸ್‌ಗಳನ್ನು ಪೊಲೀಸರು ಪತ್ತೆಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಜಾಡು ಹಿಡಿದು ಹೋಗಿರುವ ಪೊಲೀರಿಗೆ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಪುಣೆ ಪೊಲೀಸರು ಗೋಸಾವಿಯನ್ನು ಅರೆಸ್ಟ್​ ಮಾಡಿದ್ದಾರೆ.

ಈತ ಒಬ್ಬ ಖಾಸಗಿ ಡಿಟೆಕ್ಟಿವ್‌ ಎನ್ನಲಾಗಿದೆ. ಈತನ ಹಿನ್ನೆಲೆ ಕೆದಕಿದಾಗ ಅನೇಕ ಮಂದಿ ಇವನ ಬಗ್ಗೆ ದೂರು ದಾಖಲು ಮಾಡಿರುವುದು ತಿಳಿದಿದೆ. 2018ರ ಮೇ 19ರಂದು ಈತನ ವಿರುದ್ಧ ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದುದಾಗಿ ದೂರು ದಾಖಲಾಗಿತ್ತು. ಈ ಕೇಸಿನ್ನೂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದರ ನಂತರ 2020ರ ಅಕ್ಟೋಬರ್ 18ರಂದು ಕೆಲ್ವ ಪೊಲೀಸ್ ಠಾಣೆಯಲ್ಲಿ ಇನ್ನೊಂದು ವಂಚನೆ ಕೇಸ್‌ ದಾಖಲಾಗಿತ್ತು. ಇದು ಕೂಡ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ವಂಚಿಸಿರುವ ಪ್ರಕರಣ.

ಇವೆಲ್ಲ ಕೇಸ್‌ಗಳಲ್ಲಿ ಬೇಕಾಗಿದ್ದ ವ್ಯಕ್ತಿ ಅಂತೂ ಈಗ ಆರ್ಯನ್‌ ಕೇಸ್‌ನಲ್ಲಿ ಸಿಲುಕಿಬಿದ್ದಿದ್ದಾನೆ. ಪೊಲೀಸರು ಬಂಧಿಸುತ್ತಿರುವ ಸುದ್ದಿ ತಿಳಿಯುತ್ತಲೇ ಟ್ವೀಟ್‌ ಮಾಡಿರುವ ಗೋಸಾವಿ, ನಾನು ಮರಾಠಿಗ, ದಯವಿಟ್ಟು ಸರ್ಕಾರದವರು, ಸಚಿವರು ಇಲ್ಲವೇ ಕೊನೆಗೆ ವಿರೋಧ ಪಕ್ಷದವರಾದರೂ ನನಗೆ ಸಹಾಯ ಮಾಡಿ. ಮರಾಠಿಗನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net