

ಅರ್ಜೆಂಟೀನಾ: ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಖಾಸಗಿಯಾಗಿ ಸಿಕ್ಕು ನ್ಯಾಯಾಧೀಶೆಯೊಬ್ಬರು ಕಿಸ್ ಮಾಡಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದ್ದು, ವೈರಲ್ ವಿಡಿಯೋದಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೊಲೀಸರು ಕೊಲೆ ಮಾಡಿರುವ ಅಪರಾಧಿ ಕ್ರಿಶ್ಚಿಯನ್ ಬೂಸ್ಟೋಸ್ ಎಂಬುವವನ್ನು ಜೈಲಿನಲ್ಲಿ ಸಿಗಲು ಹೋಗಿದ್ದ ನ್ಯಾಯಾಧೀಶೆ ಮಾರೀಲ್ ಸೌರೇಜ್ ಎಂಬುವವರು ಕಿಸ್ ಮಾಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ವೈರಲ್ ಆಗಿಬಿಟ್ಟಿದೆ.
ಇದನ್ನು ಕಾನೂನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನ್ಯಾಯಾಧೀಶೆ, ‘ನಾನು ಕಿಸ್ ಮಾಡಿರುವುದು ನಿಜ. ಅದರಲ್ಲಿ ತಪ್ಪು ಎಂದು ನನಗೇನೂ ಎನ್ನಿಸಲಿಲ್ಲ. ಏಕೆಂದರೆ ಕ್ರಿಶ್ಚಿಯನ್ ಬೂಸ್ಟೋಸ್ ಜೀವನ ಚರಿತ್ರೆ ನನಗೆ ಕುತೂಹಲ ಎನಿಸಿದೆ. ಆತನ ಬಗ್ಗೆ ಒಂದು ಪುಸ್ತಕ ಬರೆಯುವ ಉದ್ದೇಶ ಹೊಂದಿದ್ದೇನೆ. ಆದ್ದರಿಂದ ಆತನನ್ನು ಜೈಲಿನಲ್ಲಿ ಭೇಟಿಯಾಗಲು ಹೋಗಿದ್ದೆ. ಹೋದ ವೇಳೆ ಆತನ ಬಗ್ಗೆ ಕೇಳಿ ಖುಷಿಯಾಗಿ ಕಿಸ್ ಮಾಡಿದೆ ಅಷ್ಟೇ ಎಂದಿದ್ದಾರೆ.
ಅಂದಹಾಗೆ, ಕ್ರಿಶ್ಚಿಯನ್ ಬೂಸ್ಟೋಸ್‌ನ ಕೊಲೆ ಕೇಸಿಗೆ ಸಂಬಂಧಿಸಿದಂತೆ ನಾಲ್ವರು ನ್ಯಾಯಾಧೀಶರು ವಿಚಾರಣೆ ನಡೆಸಿದ್ದರು. ಉಳಿದ ಮೂವರು ಪೊಲೀಸರನ್ನು ಕೊಂದ ಘೋರ ಕೃತ್ಯಕ್ಕೆ ಜೀವಾವಧಿ ಶಿಕ್ಷೆಯೇ ವಿಧಿಸಬೇಕು ಎಂದಿದ್ದರೆ, ನ್ಯಾಯಾಧೀಶೆ ಮಾರೀಲ್ ಸೌರೇಜ್ ಮಾತ್ರ ಜೀವಾವಧಿ ಶಿಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಿ ಸೋತಿದ್ದರು.
ಇದೀಗ ಕಾನೂನು ಉಲ್ಲಂಘಿಸಿ ಜೈಲಿನಲ್ಲಿಯೇ ಅಪರಾಧಿಗೆ ಮುತ್ತಿಕ್ಕಿರುವುದಕ್ಕೆ ನ್ಯಾಯಾಧೀಶೆ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ.