VIDEO: ತಮಿಳು ಬಿಟ್ಟು ಹಿಂದಿ ಮಾತನಾಡಿದ ನಿರೂಪಕಿ- ವೇದಿಕೆ ಬಿಟ್ಟು ಹೋದ ಎ.ಆರ್​.ರೆಹಮಾನ್​!

rehaman
Published on

ಚೆನ್ನೈ: ಆಸ್ಕರ್​ ಪ್ರಶಸ್ತಿ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​.ರೆಹಮಾನ್​ ಅವರ 99 ಹಾಡುಗಳ ಧ್ವನಿಸರಣಿ ಬಿಡುಗಡೆ ಸಮಾರಂಭದಲ್ಲಿ ನಡೆದ ಘಟನೆಯೊಂದು ಕೆಲ ಕ್ಷಣ ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದ ಘಟನೆ ಚೆನ್ನೈನಲ್ಲಿ ನಡೆಯಿತು.

ಇವರು ರಚಿಸಿ ಕಂಪೋಸ್​ ಮಾಡಿರುವ ಧ್ವನಿಸರಣಿ ಬಿಡುಗಡೆ ಸಮಾರಂಭ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಿರೂಪಕಿಯು ತಮಿಳಿನಲ್ಲಿಯೇ ಮಾತನಾಡುತ್ತಿದ್ದರು. ಆದರೆ ರೆಹಮಾನ್​ ಅವರು ವೇದಿಕೆ ಏರುತ್ತಿದ್ದಂತೆಯೇ ನಿರೂಪಕಿ ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದರು.

ಇದನ್ನು ಕೇಳಿದ ರೆಹಮಾನ್​ ಅವರು, ಹಿಂದಿ ಎಂದು ಪ್ರಶ್ನಾರ್ಥಕವಾಗಿ ನಿರೂಪಕಿಯತ್ತ ನೋಡಿ ವೇದಿಕೆಯಿಂದ ಕೆಳಕ್ಕೆ ಹೋದರು. ಅವರು ನಗುತ್ತಾ ಹೋದರೂ, ಕೆಲವು ಕ್ಷಣ ನಿರೂಪಕಿ ಸೇರಿದಂತೆ ಅಲ್ಲಿದ್ದವರು ವಿಚಲಿತರಾದದ್ದು ನಿಜ. ಆಗ ರೆಹಮಾನ್​ ಅವರು, ನೀವು ತಮಿಳಿನಲ್ಲೇ ಮಾತನಾಡಬೇಕು ಎಂದು ನಾನು ಹೇಳಿದ್ದೀನಲ್ವಾ? ಎಂದು ನಿರೂಪಕಿಯೊಂದಿಗೆ ಪ್ರಶ್ನಿಸಿದರು. ಆಗ ಅವರು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡರು.

ಕೂಡಲೇ ರೆಹಮಾನ್​ ಅವರು, ಇವೆಲ್ಲಾ ಜೋಕ್​ಗಾಗಿ ಅಷ್ಟೇ. ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ ಎಂದರು. ವಾಸ್ತವವಾಗಿ ಅವರು ಈ ರೀತಿ ಮಾಡಿದ್ದು ಕೂಡ ತಮಾಷೆಗಾಗಿಯೇ. ಇದಕ್ಕೆ ಕಾರಣ, ಹಿಂದಿ ಹೇರಿಕೆಯ ಬಗ್ಗೆ ದೇಶಾದ್ಯಂತರ ಭಾರಿ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿರೂಪಕಿ ಹಿಂದಿ ಮಾತನಾಡಿದ್ದರಿಂದ ರೆಹಮಾನ್​ ಅವರು ಈ ರೀತಿಯಾಗಿ ತಮಾಷೆಗಾಗಿ ನಕ್ಕು ವೇದಿಕೆ ಬಿಟ್ಟು ಹೋಗಿರುವುದು ಗುಟ್ಟಾಗಿ ಉಳಿಯಲಿಲ್ಲ. ಎಲ್ಲಿಯೂ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಎಲ್ಲರಿಗೂ ಸ್ವಲ್ಪ ಹೊತ್ತಿನ ಬಳಿಕ ರೆಹಮಾನ್​ ಅವರು ಅದೇ ಕಾರಣಕ್ಕಾಗಿ ತಮಾಷೆ ರೂಪದಲ್ಲಿ ವೇದಿಕೆ ಬಿಟ್ಟು ಹೋದದ್ದು ಎಂದು ತಿಳಿಯಿತು.

"ನಾನು ತಮಾಷೆಗಾಗಿ ಮಾಡಿದೆ" ಎಂದು ಹೇಳಿದಾಗ ನಿರೂಪಕಿ ಉಸಿರುಬಿಟ್ಟು, ನಿಮ್ಮಂತಹ ದಂತಕಥೆಗಳ ಕೈಯಿಂದ ತಮಾಷೆಗೊಳಗಾಗುವುದು ಕೂಡಾ ಪ್ರಶಂಸೆಯಾಗಿದೆ" ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net